Monday, August 3, 2026

ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್(ರಿ.) ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್ ಯಕ್ಷಸಾಧಕ ಪ್ರಶಸ್ತಿ ಪೊಟೋ ಮತ್ತು ವರದಿ

 







ಪ್ರಶಸ್ತಿ ಸ್ವೀಕಾರದ ಅವಕಾಶ ದೇವರು ಕೊಟ್ಟ ಆಶೀರ್ವಾದ. ಭಾಗವತಿಕೆ ಕಲಿಯಲು ಕೆರೆಮನೆ ಕೇಂದ್ರಕ್ಕೆ ಬಂದಿದ್ದ ನಾನು ಯಕ್ಷಗುರು ಹೆರಂಜಾಲು ವೆಂಕಟರಮಣ ಗಾಣಿಗ ಅವರ ಆಶಯದಂತೆ ಸ್ತ್ರೀವೇಷಧಾರಿಯಾಗಿ ಪ್ರೇಕ್ಷಕರ ಮನಗೆಲ್ಲಲು ಇಂದು ಸಫಲನಾಗಿದ್ದೇನೆ. ನಾನಿಂದು  ಹೆಸರು ಗಳಿಸಲು ವೇದಿಕೆ ಒದಗಿಸಿದ ಮೇಳಗಳ ಯಜಮಾನರನ್ನು ಮರೆಯಲು ಸಾಧ್ಯವಿಲ್ಲ. ಅವರ ಋಣ ತೀರಿಸಲಾಗದು ಎಂದು ಖ್ಯಾತ ಸ್ತ್ರೀವೇಷಧಾರಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಹೇಳಿದರು. ಅವರು ದಿನಾಂಕ: ..೨೦೨೬ರ ಶನಿವಾರದಂದು ಉಡುಪಿ ಅಜ್ಜರಕಾಡು ಪುರಭವನದಲ್ಲಿ ಯಕ್ಷಗಾನ ಕೇಂದ್ರ, ಇಂದ್ರಾಳಿ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಹಾಗೂ ಉಜ್ವಲ ಡೆವಲಪರ್ಸ್ ಆಶ್ರಯದಲ್ಲಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್(ರಿ.) ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್  ಯಕ್ಷಸಾಧಕ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ, ಪ್ರಶಸ್ತಿಯನ್ನು ಮೊದಲು  ನಾಲ್ವರು ಪುರುಷ ಪಾತ್ರಧಾರಿಗಳಿಗೆ ನೀಡಲಾಗಿದೆ. ಯಲಗುಪ್ಪ ಅವರು ಸ್ತ್ರೀ ಪಾತ್ರಧಾರಿಯಾಗಿರುವಾಗ ಅವರ ಹಾವಭಾವ, ಮಾತು, ನೃತ್ಯ ಯಾರಿಂದಲೂ ಮೀರಿಸಲಾಗದುಇಂತಹ ಶ್ರೇಷ್ಠ ಕಲಾವಿದರನ್ನು ಗೌರವಿಸುವುದು ನಮಗೆ ಬಹು ಹೆಮ್ಮೆಯ ವಿಚಾರ. ಇದರೊಂದಿಗೆ ಮುಂದಿನ ದಿನಗಳಲ್ಲಿ ಉತ್ತಮವಾಗಿ ಮೇಳ ನಡೆಸುತ್ತಿರುವ ಯಜಮಾನರನ್ನು ಪ್ರೋತ್ಸಾಹಿಸಲು ಟ್ರಸ್ಟ್ ವತಿಯಿಂದ ಯಕ್ಷಪೋಷಕ ಗೌರವ ಪುರಸ್ಕಾರ ನೀಡಲಿದ್ದೇವೆ. ಆಗಸ್ಟ್ ೨೩, ೨೦೨೬ರಂದು ಇದೇ ಪುರಭವನದಲ್ಲಿ ಪೆರ್ಡೂರು ಮೇಳದ ಯಜಮಾನರಾದ ಶ್ರೀ ವೈ. ಕರುಣಾಕರ ಶೆಟ್ಟಿಯವರಿಗೆ ನೀಡಲಾಗುತ್ತಿದೆ ಎಂದರು.

ಜಿ.ಶಂಕರ್ ಫ್ಯಾಮಿಲಿ ಟ್ರಸಸ್ಟಿನ ಪ್ರವರ್ತಕ ಡಾ ಜಿ.ಶಂಕರ್, ಉಜ್ವಲ್ ಡೆವಲಪರ್ಸ್ ಎಂ.ಡಿ ಪುರುಷೋತ್ತಮ ಶೆಟ್ಟಿ, ಯಕ್ಷಗಾನ ಕೇಂದ್ರ, ಇಂದ್ರಾಳಿ ಇದರ ಸಲಹಾಸಮಿತಿ ಅಧ್ಯಕ್ಷರಾದ ಮೇಳಗಳ ಯಜಮಾನರೂ ಆದ ಪಳ್ಳಿ ಕಿಶನ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ನಾಗರಾಜ ಶಂಕರನಾರಾಯಣ ಗಣಪತಿ ಸ್ತುತಿಯೊಂದಿಗೆ ಪ್ರಾರ್ಥಿಸಿದರು. ಶ್ರೀ ಭುವನ ಪ್ರಸಾದ್ ಹೆಗ್ಡೆ ಪ್ರಶಸ್ತಿ ಪತ್ರ ವಾಚಿಸಿದರು. ಇಂದ್ರಾಳಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಎಂ.ಜಿ.ಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ. ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಒಗ್ಗೂಡುವಿಕೆಯಲ್ಲಿ ತಾಮ್ರಧ್ವಜ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.

No comments: