ವೈ. ಕರುಣಾಕರ ಶೆಟ್ಟಿ ಅವರು ಕರಾವಳಿಯ ಹಲವು ಯಕ್ಷಗಾನ ಮೇಳಗಳ ಯಜಮಾನರು ಹಾಗೂ ಹೆಸರಾಂತ ಕಲಾ ಸಂಘಟಕರಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ೪೫ಕ್ಕೂ ಅಧಿಕ ವರ್ಷಗಳ ಅನುಭವ ಹೊಂದಿರುವ ಅವರು, ಕಳೆದ ೪ ದಶಕಗಳಿಂದ ಪೆರ್ಡೂರಿನ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ, ಜೊತೆಗೆ ಶ್ರೀ ಕ್ಷೇತ್ರ ಹಾಲಾಡಿ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಮತ್ತು ಸಿಗಂದೂರು ಮೇಳವನ್ನೂ ಸಮರ್ಥವಾಗಿ ಮುನ್ನಡೆಸುತ್ತಾ ಗುಣಮಟ್ಟದ ಯಕ್ಷಗಾನಪ್ರದರ್ಶನಗಳಿಗೆ ಕಾರಣೀಭೂತರಾಗಿದ್ದಾರೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿಯೂ ಕಲಾವಿದರ ಬದುಕಿಗೆ ಆಸರೆಯಾಗಿದ್ದವರು.
ಅವರ ಸುದೀರ್ಘ ಕಲಾಸೇವೆ ಮತ್ತು ಸಂಘಟನಾ ಸಾಮರ್ಥ್ಯವನ್ನು ಗಮನಿಸಿ ನೂರಕ್ಕೂ ಹೆಚ್ಚು ಸನ್ಮಾನಗಳು ಹಾಗೂ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ. ಯಕ್ಷಗಾನ ಕ್ಷೇತ್ರದ ಅಭಿವೃದ್ಧಿಗೆ ಇವರು ಸಲ್ಲಿಸಿರುವ ಸೇವೆ ಕರಾವಳಿಯ ಸಾಂಸ್ಕೃತಿಕ ಇತಿಹಾಸದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿದೆ. ಇವರಿಗೆ ೨೦೨೬ನೇ ಸಾಲಿನ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ (ರಿ.,) ಉಡುಪಿ ಪ್ರಾಯೋಜಿತ ಯಕ್ಷಪೋಷಕ ಗೌರವ ಪ್ರಶಸ್ತಿಯನ್ನು ಯಕ್ಷಗಾನ ಕೇಂದ್ರ, ಇಂದ್ರಾಳಿ ಇದರ ಸಹಯೋಗದೊಂದಿಗೆ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ದಿ. ೨೩.೦೮.೨೦೨೬ರ ಆದಿತ್ಯವಾರದಂದು ಉಡುಪಿಯ ಪುರಭವನದಲ್ಲಿ ನಡೆಯಲಿದೆ. ಅಂದು ಪ್ರಸಿದ್ಧ ಯಕ್ಷಕಲಾವಿದರ ಕೂಡುವಿಕೆಯಲ್ಲಿ ಕೃಷ್ಣಾರ್ಜುನ ಕಾಳಗ ಎಂಬ ಪ್ರಸಂಗದ ಪ್ರದರ್ಶನ ನಡೆಯಲಿದೆ ಎಂದು ಯಕ್ಷಗಾನ ಕೇಂದ್ರ, ಇಂದ್ರಾಳಿ ಇದರ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment