Thursday, July 30, 2026

ಸೇಡಿಯಾಪು ಪ್ರಶಸ್ತಿ ಕಾರ್ಯಕ್ರಮ, ೨೮.೦೭.೨೦೨೬ ಮೈಸೂರಿನಲ್ಲಿ

 







ಇಂದು ಗ್ರಂಥಸಂಪಾದನೆ, ಸಂಶೋಧನೆಯ ಕೆಲಸಗಳು ಕನ್ನಡದ ಸಂದರ್ಭದಲ್ಲಿ ತುಂಬಾ ನಿಧಾನವಾಗುತ್ತಿವೆ. ಕಾರಣಗಳು ಹಲವಾರು. ಈ ಕ್ಷೇತ್ರದಲ್ಲಿ ಆಸಕ್ತಿವುಳ್ಳವರು ಕಡಿಮೆ ಮತ್ತು ಈ ಕ್ಷೇತ್ರಕ್ಕೆ ಬಂದವರು ಉದ್ಯೋಗಾವಕಾಶವನ್ನು ಬಯಸಿದರೆ ಅದಕ್ಕೆ ಇಂದು ಅವಕಾಶಗಳು ಕಡಿಮೆ. ಹತ್ತಾರು ವರುಷಗಳ ಹಿಂದೆ ತಾತ್ತಿ÷್ವಕಶುದ್ಧತೆಯಿಂದ, ಬದ್ಧತೆಯಿಂದ ಇಂತಹ ಗಹನವಾದ ವಿಚಾರಗಳನ್ನು ಬಹುಗೌರವದಿಂದ ಮಾಡುತ್ತಿದ್ದರು. ಹೀಗಾಗಿ ದಾಸಸಾಹಿತ್ಯದ ಜನಪ್ರಿಯ ಪಠ್ಯ ಹಾಗೂ ಅಧ್ಯಯನಯುಕ್ತ ಸಂಶೋಧನ ಪಠ್ಯಗಳೆಂಬ ಎರಡು ಬಗೆಯ ರೂಪಗಳಲ್ಲಿ ಓದುಗರಿಗೆ ಲಭಿಸುತ್ತಿತ್ತು. ಸಂಶೋಧಿತ ಪಠ್ಯಗಳನ್ನು ಹೊರತರುವಲ್ಲಿ ಅಪಾರ ಶ್ರಮ ಬೇಕಾಗುತ್ತಿತ್ತು. ಕರ್ನಾಟಕದಲ್ಲಿ ಪ್ರೊ. ಜಿ. ವರದರಾಜ ರಾಯರು ದಾಸಸಾಹಿತ್ಯದ ಸಂಶೋಧನೆ ಸಂಪಾದನೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು. ಅನಂತರದಲ್ಲಿ ಡಾ. ಟಿ. ಎನ್. ನಾಗರತ್ನ ಅವರು ಆ ಹಾದಿಯಲ್ಲಿ ನಡೆದು ದಾಸಸಾಹಿತ್ಯದ ಅಧಿಕೃತ ಪಠ್ಯಗಳಿಗೆ  ಬುನಾದಿ ಹಾಡಿದರು.  ಸದಾ ಅಧ್ಯಯನಶೀಲರಾದ ಡಾ. ಟಿ.ಎನ್. ನಾಗರತ್ನ ಅವರು ಕನ್ನಡ ಸಾರಸ್ವತ ಲೋಕಕ್ಕೆ ಹಲವಾರು ಮೌಲಿಕ ಕೃತಿಗಳನ್ನು  ನೀಡಿದ್ದಾರೆ.  ಹಾಗಾಗಿ ಅವರ ಹೆಸರು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಎಂದೂ ಮರೆಯಾಗದು. ಇಂತಹ  ಶ್ರೇಷ್ಠ ಸಂಶೋಧಕಿ, ಗ್ರಂಥ ಸಂಪಾದಕಿಗೆ ಸೇಡಿಯಾಪು ಪ್ರಶಸ್ತಿ ಬಂದಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂಬುದಾಗಿ ನಾಡಿನ ಹಿರಿಯ ವಿದ್ವಾಂಸರೂ, ಸಂಶೋಧಕರು ಆದ ಪ್ರೊ. ಟಿ.ವಿ ವೆಂಕಟಾಚಲ ಶಾಸ್ತ್ರಿ ಹೇಳಿದರು. ಅವರು ಇತ್ತೀಚೆಗೆ ಮೈಸೂರಿನಲ್ಲಿ ಡಾ.ಟಿ.ಎನ್. ನಾಗರತ್ನ ಅವರ ಸ್ವಗೃಹದಲ್ಲಿ  ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಮೂಲಕ ಕೊಡಮಾಡುವ ಸೇಡಿಯಾಪು ಪ್ರಶಸ್ತಿ ಪ್ರದಾನಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 

ನಾಡಿನ ಹಿರಿಯ ವಿದ್ವಾಂಸರೂ, ಸೇಡಿಯಾಪು ಪ್ರಶಸ್ತಿ ಆಯ್ಕೆ ಸಮಿತಿಯ ಹಿರಿಯ ಸದಸ್ಯರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಅಭಿನಂದನಾ ಮಾತುಗಳನ್ನಾಡಿದರು. ಡಾ. ಟಿ.ಎನ್. ನಾಗರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ,  ಇಂತಹ ಪ್ರಶಸ್ತಿಗಳು ಜೀವನದ ಸಂಭ್ರಮಗಳಲ್ಲೊಂದು. ಪ್ರಾತ: ಸ್ಮರಣೀಯರಾದ ಸೇಡಿಯಾಪು ಕೃಷ್ಣಭಟ್ಟರ ಹೆಸರಲ್ಲಿ ಪಡೆದ ಈ ಪ್ರಶಸ್ತಿ ನನ್ನ ಪುಟ್ಟ ಸಾಧನೆಗೆ ಗರಿಇಟ್ಟಂತಾಗಿದೆ ಎಂದರು. ಮುಳಿಯ ರಾಘವಯ್ಯ, ಪ್ರೊ. ಎಚ್.ಎಂ. ನಾಗರಾಜ ರಾವ್ ಮುಂತಾದ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ ಜಗದೀಶ್ ಶೆಟ್ಟಿ ಪ್ರಸ್ತಾವನೆಯ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಆರ್.ಆರ್.ಸಿಯ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್ ಕಾಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು. ಆರ್.ಆರ್.ಸಿ.ಯ ವಿನೇಶ್ ಅವರು ಕಾರ್ಯಕ್ರಮ ರೂಪಿಸುವಲ್ಲಿ ಸಹಕರಿಸಿದರು.


No comments: