Monday, October 12, 2026

ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ ಕಾರ್ಯಕ್ರಮ (10.10.2026 , ಸ್ಥಳ: ಐವೈಸಿ,ಯಕ್ಷಗಾನ ಕಲಾರಂಗ ಸಭಾಂಗಣ)

 





ಡಾ. ಶಿವರಾಮ ಕಾರಂತರು ಇಂದ್ರಾಳಿಯ ಯಕ್ಷಗಾನ ಕೇಂದ್ರ ಆರಂಭಿಸಲು ಪ್ರಮುಖ ಕಾರಣಕರ್ತರು. ಯಕ್ಷಗಾನ ಕೇಂದ್ರದಲ್ಲಿ ಅವರು ಗೆಜ್ಜೆ ಕಟ್ಟಿ ಕುಣಿಯುವ ಮೂಲಕ ಯಕ್ಷಗಾನ ಪಸರಿಸಲು ಶ್ರಮಿಸಿದ್ದರು. ಯಕ್ಷಗಾನವನ್ನು ಉಳಿಸಿಬೆಳೆಸುವ ನಿಟ್ಟಿನಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ಕೇಂದ್ರದ ವತಿಯಿಂದ ಆಯೋಜಿಸಲಾಗುತ್ತಿದೆ ಎಂದು ಮಾಹೆ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಹೇಳಿದರು. ಅವರು ದಿನಾಂಕ: ೧೦.೧೦.೨೦೨೬ರಂದು ಯಕ್ಷಗಾನ ಕೇಂದ್ರ ಇಂದ್ರಾಳಿ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇದರ ಸಹಯೋಗದಲ್ಲಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ನಡೆದ ಡಾ. ಕೋಟ ಶಿವರಾಮ ಕಾರಂತರ ೧೨೪ನೇ  ಜನ್ಮದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೂರ್ಣಪ್ರಜ್ಞ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಶ್ರೀಕಾಂತ್‌ರಾವ್ ಸಿದ್ಧಾಪುರ ಕಾರಂತರ ಸಂಸ್ಮರಣೆಯ ಮಾತುಗಳನ್ನಾಡುತ್ತಾ, ಮಹಾತ್ಮಗಾಂಧಿ ಅವರಿಂದ ಪ್ರಭಾವಿತರಾಗಿದ್ದ ಕಾರಂತರು ಮನೆ, ಮನೆಗೆ ತೆರಳಿ ಖಾದಿ ಮತ್ತು ದೇಶಭಕ್ತಿಯ ಬಗ್ಗೆ ಜನರಿಗೆ ತಿಳಿಸುತ್ತಿದ್ದರು. ಓದಿಗಿಂತಲೂ ಕಾರಂತರು ಜಗತ್ತು ಸುತ್ತುತ್ತಿದ್ದರು. ನಿರಾಶಾವಾದವನ್ನು ಅವರು ಎಂದೂ ಹೇಳಿಲ್ಲ. ತನ್ನಲ್ಲಿ ಇಲ್ಲದ ಜ್ಞಾನವನ್ನು ಇನ್ನೊಬ್ಬರಿಂದ ಕೇಳಿತಿಳಿದುಕೊಳ್ಳಲು ಅವರು ಯಾವುದೇ ಹಿಂಜರಿಕೆ ತೋರುತ್ತಿರಲಿಲ್ಲ ಎಂದರು. ಇಂದು ಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾರಂತರ ಕೃತಿಗಳನ್ನು ಓದುವ ಅಗತ್ಯವಿದೆ. ಅವರು ಹೇಳಿರುವ ಪ್ರಾಮಾಣಿಕತೆ, ಪರಿಶ್ರಮ ಮೊದಲಾದ   ಮೌಲ್ಯಗಳನ್ನು ನಾವೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಇದರ ಕಾರ್ಯದರ್ಶಿ ಡಾ. ನಾರಾಯಣ ಸಭಾಹಿತ ಮಾತನಾಡಿ,  ಶಿವರಾಮ ಕಾರಂತರು ಹೊಸತನ ಬಯಸಿದವರು. ಜೀವನ ನಿಂತನೀರಾಗಬಾರದು. ಬದಲಾವಣೆಯು ಪ್ರಗತಿಗೆ ಮೂಲ ಎಂದು ಅವರು ನಂಬಿದ್ದರು. ಯಕ್ಷಗಾನ, ಸಾಹಿತ್ಯ, ವಿಜ್ಞಾನ ಪರಿಸರ ಸೇರಿದಂತೆ ಹಲವಾರು ವಿಷಯಗಳಲ್ಲಿ ಕಾರಂತರು ಆಳವಾದ ಅಧ್ಯಯನ ಮಾಡಿದ್ದರು. ಯಕ್ಷಗಾನದಲ್ಲಿ ಹೊಸ ಪ್ರಯೋಗಗಳನ್ನು ಮಾಡಿದ್ದರು. ಅವರಿಂದ ಸ್ಫೂರ್ತಿ ಪಡೆದು ಇಂದ್ರಾಳಿ ಯಕ್ಷಗಾನ ಕೇಂದ್ರದಲ್ಲೂ ಕೃತಕ ಬುದ್ಧಿಮತೆಯನ್ನು ಯಕ್ಷಗಾನದಲ್ಲಿ ಬಳಸುವ ಬಗ್ಗೆ ನಾವು ಚಿಂತನೆ ನಡೆಸುತ್ತಿದ್ದೇವೆ ಎಂದರು.

ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆಯವರಿಂದ ಕಾರ್ತವೀರ್ಯರ್ಜುನ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು.

Sunday, September 27, 2026

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರಕ್ಕೆ ಹಂಪಿ ವಿ.ವಿ ಭೇಟಿ

 



ದಿನಾಂಕ ೨೫.೦೯.೨೦೨೬ರಂದು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾದ ಡಾ. ಪರಮಶಿವ ಮೂರ್ತಿ ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರಕ್ಕೆ  ಭೇಟಿ ನೀಡಿ ಸಂಸ್ಥೆಯ ದಾಖಲಾತಿ ವಿಭಾಗ ಹಾಗೂ ಪ್ರಕಟಣಾ ವಿಭಾಗಗಳ ಸುತ್ಯಾರ್ಹ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಬಿ. ಜಗದೀಶ್ ಶೆಟ್ಟಿ ಹಾಗೂ ಆರ್.ಆರ್.ಸಿ ಸಹ ಸಂಶೋಧಕರಾದ ಡಾ. ಅರುಣ ಕುಮಾರ್ ಎಸ್.ಆರ್,  ಮಾಹೆ ವಿದ್ಯಾರ್ಥಿ ಕೆ. ಶ್ರೇಯಸ್ ಮೊದಲಾದವರು ಜೊತೆಗಿದ್ದರು.


Thursday, September 24, 2026

ದಿನಾಂಕ:೨೩.೦೯.೨೦೨೬ರಂದು ನಡೆದ ಕನಕ ಚಿಂತನ-ವಿಶೇಷ ಉಪನ್ಯಾಸ ಮಾಲಿಕೆ - ಕನಕ ಸಾಹಿತ್ಯದಲ್ಲಿ ನೆಲ-ಜಲ ಸಂಸ್ಕೃ ಚಿಂತನೆ ಕಾರ್ಯಕ್ರಮ

 







ಕನಕದಾಸರು ಕೇವಲ ಸಂತರಲ್ಲ, ಕವಿ, ತತ್ವಜ್ಞಾನಿ, ಸಂಗೀತಗಾರರಾಗಿ ಬೆಳಗಿದವರು. ಅವರ ಲೌಕಿಕ ಬದುಕಿನ ಕುರಿತಾದ ನಿಲುವುಗಳನ್ನೇ ಅವರು ಅನುಭವದ ಸಾಹಿತ್ಯ ಸೃಷ್ಟಿಯಾಗಿಸಿದರು. ಸಮಾಜ ಹೇಗಿದೆ? ಹೇಗಾಗಬೇಕು ಎಂಬುದರ ಬಗ್ಗೆ ಅವರ ಚಿಂತನೆಗಳು ಪ್ರಾಯೋಗಿಕವಾದುವುಗಳು. ಹಾಗಾಗಿಯೇ ಕನಕದಾಸರು ಇಂದಿಗೂ ಪ್ರಸ್ತುತರಾಗುತ್ತಾರೆ. ಲೌಕಿಕದಲ್ಲೇ ಅಲೌಕಿಕವನ್ನು ಹುಡುಕುವ, ಅದಕ್ಕಾಗಿ ತನ್ನ ಜೀವನ ದಾರಿಯನ್ನು ಸರಿಪಡಿಸಿಕೊಳ್ಳುವ ಬಗ್ಗೆ ಅವರು ತುಂಬಾ ಪ್ರಾಯೋಗಿಕವಾಗಿ ಬದುಕಿದರು.  ಸರ್ವಸಮಾನತೆಯನ್ನು ಬದುಕಿನ ಮೂಲ ಚಿಂತನೆಯಾಗಿ ಕಂಡುಕೊಳ್ಳಬೇಕೆಂಬುದಾಗಿ ಕನಕದಾಸರು ಕನಸು ಕಂಡರು. ತಾವೂ ಹಾಗೆ ಬದುಕಿದರು. ಸಮಾಜದಲ್ಲಿ ಬದಲಾವಣೆಗಾಗಿ ಶ್ರಮಿಸಿದರು ಎಂಬುದಾಗಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ  ನೀಲಾವರ ಸುರೆಂದ್ರ ಅಡಿಗ ಹೇಳಿದರು. ಅವರು ದಿನಾಂಕ: ೨೩.೦೯.೨೦೨೬, ಬುಧವಾರದಂದು,  ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನಕದಾಸ ಅಧ್ಯಯನ ಸಂಶೋಧನ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ  ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಾರಕೂರು, ಕನ್ನಡ ವಿಭಾಗ ಇದರ ಜಂಟಿ ಆಶ್ರಯದಲ್ಲಿ ನಡೆದ ಕನಕ ಸಾಹಿತ್ಯದಲ್ಲಿ ನೆಲ-ಜಲ ಸಂಸ್ಕೃತಿ  ಚಿಂತನೆ; ಎಂಬ ವಿಷಯದಲ್ಲಿ ನಡೆದ ಕನಕ ಚಿಂತನ-ವಿಶೇಷ ಉಪನ್ಯಾಸ ಮಾಲಿಕೆಯ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಭಾಸ್ಕರ್ ಶೆಟ್ಟಿ ಮಾತನಾಡಿ, ದಾಸ ಶ್ರೇಷ್ಟರಲ್ಲಿ ಕನಕದಾಸರು ಬಹುಮುಖ್ಯರಾಗುತ್ತಾರೆ. ಅವರ ತತ್ವ, ಚಿಂತನೆಗಳು ಅನುಕರಣಯೋಗ್ಯ. ಕನಕದಾಸರ ಸಮಾನತೆ, ಮಾನವೀಯ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ನಮ್ಮಲ್ಲಾಗಬೇಕು  ಎಂದರು. 

ಕನಕದಾಸರ ಕೀರ್ತನೆಗಳಲ್ಲಿ ನೆಲ-ಜಲ ಸಂಸ್ಕೃತಿ ಚಿಂತನೆ ಎಂಬ ವಿಷಯದ ಕುರಿತು ಪುತೂರಿನ ಬೆಟ್ಟಂಪಾಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಸುಬ್ರಹ್ಮಣ್ಯ ಕೆ ಅವರು ಮಾತನಾಡಿ  ‘ಕನಕದಾಸರ ಕೀರ್ತನೆಗಳು ನೆಲ-ಜಲಗಳ, ಅಂದರೆ ಪ್ರಕೃತಿಯ ರೂಪಕಗಳಾಗಿ ಮೂಡಿವೆ. ಅವರ ಬದುಕನ್ನು ಗಮನಿಸಿದರೆ ಹಲವು ರೀತಿಯಲ್ಲಿ ನಿರಾಕರಣೆಗೆ ಅವರು ಒಳಗಾದರೂ, ಈ ಭೂಮಿಗೆ, ನೀರಿಗೆ ಭೇದಭಾವ ಇಲ್ಲ. ಇವೆರಡೂ ಎಲ್ಲರಿಗೂ, ಸಮಾನವಾಗಿ ದಕ್ಕುತ್ತವೆ. ಭೇದವಿಲ್ಲದೆ ಸಕಲ ಜೀವಿಗಳನ್ನು ಹೊತ್ತಿಹಳು ಭೂದೇವಿ’ ಎಂಬ ಕೀರ್ತನೆಯಲ್ಲಿ ಸಮಾನತೆಯ ಚೈತನ್ಯ ಇಡೀ ಪರಿಸರದಲ್ಲಿದೆ. ಆದರೆ ಮನುಜರಲ್ಲಿ ನಿರಂತರವಾಗಿ ಪುಟಿದೇಳುವ ಅವೈಚಾರಿಕ ಚಿಂತನೆಗಳು ಅವರ ಸುಗಮದಾರಿಗೆ ಮುಳ್ಳಾಗುತ್ತವೆ ಎಂಬುದನ್ನು ಕನಕದಾಸರು ತಮ್ಮ ಹಲವು ಕೀರ್ತನೆಗಳಲ್ಲಿ ನಿಚ್ಚಳವಾಗಿ ಪಡಿಮೂಡಿಸುತ್ತಾರೆ’ ಎಂದರು. 

ಕನಕದಸರ ಕಾವ್ಯಗಳಲ್ಲಿ ನೆಲ-ಜಲ ಸಂಸ್ಕೃತಿ ಚಿಂತನೆ ಎಂಬ ವಿಚಾರವಾಗಿ ಕುಂದಾಪುರ ವಕ್ವಾಡಿಯ ಗುರುಕುಲ ಪ.ಪೂ ಕಾಲೇಜಿನ ಉಪನ್ಯಾಸಕರಾದ ಡಾ.ಕೃಷ್ಣರಾಜ ಕರಬ ತಮ್ಮ ಉಪನ್ಯಾಸದಲ್ಲಿ ಮಾತನಾಡಿ ಕನಕದಾಸರು ತಿಮ್ಮಪ್ಪ ದಂಡನಾಯಕರಾಗಿದ್ದ ಕಾಲದಲ್ಲಿ ಕಟ್ಟಿಸಿದ ಕೆರೆಗಳು, ಜಲಮೂಲಗಳ ಸಂಗ್ರಹಗಳನ್ನು ಕಟ್ಟುವುದಕ್ಕೆ ತೋರಿದ ಉತ್ಸಾಹದಿಂದಲಾಗಿ  ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಕೃಷಿ ಸಂಪತ್ತು ಅರಳಿದವು. ಅವರ ಕಾವ್ಯಗಳಲ್ಲಿ ಅಲೌಕಿಕ ಚಿತ್ರಗಳನ್ನು ಪಡಿಮೂಡಿಸುವ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ರಾಮಧಾನ್ಯ ಚರಿತೆಯಲ್ಲಿ ನೆಲ-ಜಲ ಸಂಸ್ಕೃತಿಯ ಚಿಂತನೆಯನ್ನು ಅಪಾರವಾಗಿ ಹುದುಗಿಡುತ್ತಾರೆ. ಸ್ಥಾವರ ಮತ್ತು ಜಂಗಮ ಪರಿಕಲ್ಪನೆಯಡಿಯಲ್ಲಿ ನೆಲ ಮತ್ತು ನೀರಿನ ಕುರಿತಾದ ಚಿಂತನೆಯನ್ನು ಮಾಡುತ್ತಾರೆ ಎಂಬುದಾಗಿ ಸೋದಾಹರಣವಾಗಿ ಚರ್ಚಿಸಿದರು.

ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ  ಪ್ರಾಸ್ತಾವಿಕವಾಗಿ ಮಾತನಾಡಿ  ಅತಿಥಿಗಳನ್ನು ಸ್ವಾಗತಿಸಿದರು. ಕನಕದಾಸ ಅಧ್ಯಯನ ಸಂಶೋಧನ ಪೀಠದ ಸಲಹಾ ಸಮಿತಿ ಸದಸ್ಯರಾದ ಡಾ. ಅರುಣ್ ಕುಮಾರ್ ಎಸ್.ಆರ್. ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ  ಶ್ರೀಮತಿ ಶೈಲಜಾ ಶೆಟ್ಟಿ ವಂದಿಸಿದರು. ಡಾ. ಪಲ್ಲವಿ ಎನ್ ಕಾರ್ಯಕ್ರಮ ನಿರೂಪಿಸಿದರು.


Monday, September 21, 2026

ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಕೇಂದ್ರಕ್ಕೆ ಕುಂದಾಪುರದ ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಭೇಟಿ

 



ದಿನಾಂಕ: ೧೯.೦೯.೨೦೨೬ರಂದು ಕುಂದಾಪುರದ ಬಿ.ಬಿ. ಹೆಗ್ಡೆ ಪ್ರಥಮದರ್ಜೆ ಕಾಲೇಜಿನ, ಪ್ರಥಮ ಹಾಗೂ ದ್ವಿತೀಯ ವರ್ಷದ ಲಲಿತಕಲಾ ಸಂಘದ ವಿದ್ಯಾರ್ಥಿಗಳು  ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರಕ್ಕೆ ಭೇಟಿ ನೀಡಿ, ಇಲ್ಲಿಯ ಗ್ರಂಥಾಲಯ, ಪ್ರಾಚ್ಯವಸ್ತು ಸಂಗ್ರಹಾಲಯದ ಮಾಹಿತಿ ಹಾಗೂ ಆರ್.ಆರ್.ಸಿಯ ದಾಖಲೀಕರಣ ಮುಂತಾದ ಕಾರ್ಯಚಟುವಟಿಕೆಗಳ ಮಾಹಿತಿಗಳನ್ನು ಆಡಳಿತಾಧಿಕಾರಿಗಳಾದ ಡಾ.ಬಿ. ಜಗದೀಶ್ ಶೆಟ್ಟಿ ಅವರಿಂದ ಪಡೆದರು. ಕಾಲೇಜಿನ ಆಡಳಿತ ನಿಕಾಯದ ಡೀನ್ ರಕ್ಷಿತ್ ರಾವ್, ಐ.ಕ್ಯೂ.ಎ.ಸಿ ಸಂಯೋಜಕರಾದ ದೀಪಿಕಾ ಜಿ ಹಾಗೂ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ  ನಿರ್ಮಲಾ ಬಿ. ಮಾರ್ಗದರ್ಶಕರಾಗಿ  ಭಾಗವಹಿಸಿದ್ದರು.

Wednesday, September 16, 2026

ದಿನಾಂಕ:12.09.2026ರಂದು ನಡೆದ ಕು.ಶಿ ಹರಿದಾಸ ಭಟ್ ಜಾನಪದ ಪ್ರಶಸ್ತಿ ಹಾಗೂ ಡಾ. ಯು.ಪಿ ಉಪಾಧ್ಯಾಯ-ಡಾ. ಸುಶೀಲಾ ಪಿ, ಉಪಾಧ್ಯಾಯ ಪ್ರಶಸ್ತಿ ಕಾರ್ಯಕ್ರಮ

 











ಪರಂಪರೆಯ ಅನುಭವದಿಂದ ದೇಶ ಕಟ್ಟಲು ಸಾಧ್ಯ - ಪ್ರೊ. ಬಿ.ಎ ವಿವೇಕ ರೈ

ಪರಂಪರೆಯ ಅರಿವು, ಅನುಭವ ತಿಳುವಳಿಕೆಯನ್ನು ಬಿಟ್ಟು ಸಮಾಜ, ದೇಶವನ್ನು ಕಟ್ಟಲಾಗದು ಎಂದು  ಡಾ ಬಿ.ಎ ವಿವೇಕ ರೈ ಹೇಳಿದರು. ಅವರು ದಿನಾಂಕ ೧೨.೦೯.೨೦೨೬ರಂದು ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಕೊಡಮಾಡುವ ಶ್ರೀಮತಿ ಆಶಾ ಕುತ್ಯಾರ್ ಹಾಗೂ ಅಶೋಕ್ ಕುತ್ಯಾರ್ ಪ್ರಾಯೋಜಿತ ಪ್ರೊ. ಕು.ಶಿ ಹರಿದಾಸ ಭಟ್ಟರ ಸ್ಮರಣಾರ್ಥ ನೀಡಲಾಗುವ ಪ್ರೊ. ಕು.ಶಿ ಹರಿದಾಸ ಭಟ್ ಜಾನಪದ ಪ್ರಶಸ್ತಿ ಹಾಗೂ ಡಾ. ಯು. ಪಿ ಉಪಾಧ್ಯಾಯ ಹಾಗೂ ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಕೋಟಿ, ಟ್ರೆಲಿಯನ್ ಆರ್ಥಿಕತೆಯಿದ್ದರೂ ಭಾಷೆ, ಸಾಹಿತ್ಯ, ಸಂಸ್ಕೃತಿ ತಿಳಿಯದಿದ್ದರೆ ಏನು ಪ್ರಯೋಜನ?ಹಣದಿಂದ ಎಲ್ಲವನ್ನೂ ಕಟ್ಟಲಾಗದು. ವಿದ್ವತ್ ಪರಂಪರೆ ಕ್ಷೀಣಿಸುತ್ತಿದ್ದು ಹೊಸ ಪರಂಪರೆಯನ್ನು ಜೋಡಿಸಬೇಕು. ಮನೋಧರ್ಮವಿಲ್ಲದೆ ಸಂಶೋಧನೆ ಸಾಧ್ಯವಾಗದು.  ಸಂಸ್ಕೃತಿಯ ಒಳಹೋಗಿ ಸಂಶೋಧನೆ, ಅಧ್ಯಯನ ಮುಂದುವರಿಯಬೇಕು ಎಂದರು.

ದೇಶದ ಜೆನ್‌ಜಿ ಹಿಂದಿನ ಪರಂಪರೆ ಅಳವಡಿಸಿ ಮುಂದುವರಿಸುವ ಆಸಕ್ತಿ ವಹಿಸಬೇಕಿದೆ. ವಿದ್ಯಾರ್ಥಿಗಳು ಹೆಚ್ಚು ಓದುವ ಮೂಲಕ ಜ್ಞಾನವೃದ್ಧಿಸಿಕೊಂಡು ಹೊಸತನ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಜೀವನದಲ್ಲಿ ಪ್ರತಿದಿನ ಹೊಸ ಹೆಜ್ಜೆಗಳನ್ನು ಇಡಬೇಕು. ಇಂದಿನ ಕಾಲಘಟ್ಟದಲ್ಲಿ ಹೊಸ ಪೀಳಿಗೆಗೆ ಪ್ರೊ. ಕೆ.ಪಿ ರಾವ್  ಹಾಗೂ ಕನರಾಡಿ ವಾದಿರಾಜ ಭಟ್ಟರು ಮಾದರಿ ಮತ್ತು ಪ್ರೇರಕರಾಗಿದ್ದಾರೆ ಎಂದರು.

೨೦೨೬ನೇ ಸಾಲಿನ ಕು.ಶಿ ಜಾನಪದ ಪ್ರಶಸ್ತಿಯನ್ನು  ಹಿರಿಯ ಜಾನಪದ ತಜ್ಞ ಡಾ. ಕನರಾಡಿ ವಾದಿರಾಜ ಭಟ್ ಅವರಿಗೆ, ೨೦೨೫ನೇ ಸಾಲಿನ ಡಾ. ಯು.ಪಿ ಉಪಾಧ್ಯಾಯ ಹಾಗೂ ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿಯನ್ನು ಗಣಕತಂತ್ರಜ್ಞ ಪ್ರೊ. ಕೆ.ಪಿ ರಾವ್ ಅವರಿಗೂ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃತ ಡಾ. ಕನರಾಡಿ ವಾದಿರಾಜ ಭಟ್ ಮಾತನಾಡಿ ’ನನಗೆ ಜಾನಪದ ವಿಷಯವಾಗಿ ಬೆಳಕು ತೋರಿದವರು ಪ್ರೊ.ಬಿ.ಎ ವಿವೇಕ ರೈ ಅವರು. ನನ್ನ ಎಲ್ಲಾ ಜಾನಪದ ಗುರುಗಳು ಮತ್ತು ವಿದ್ಯಾರ್ಥಿಗಳ ಪರವಾಗಿ  ಈ ಪ್ರಶಸ್ತಿ ಸ್ವೀಕರಿಸಿದ್ದೇನೆ. ಮುಂದೆ ಜಾನಪದ ಕೃತಿ ಪ್ರಕಟಿಸುವ ವೇಳೆ ಈ ಪ್ರಶಸ್ತಿ ಹಣವನ್ನು ಕು.ಶಿ ಅವರ ಹೆಸರಿನಲ್ಲಿ ಸಮರ್ಪಿಸುತ್ತೇನೆ. ಹಳ್ಳಿಯ ಜನಪದರ ವಿದ್ವತ್ತು ಗುರುತಿಸುವ ಪ್ರವೃತ್ತಿ ಹೆಚ್ಚಬೇಕು ಎಂದರು.

 ಪ್ರೊ. ಕೆ.ಪಿ ರಾವ್ ಮಾತನಾಡಿ, ಭಾಷೆಯ ವಿನ್ಯಾಸ ಮತ್ತು ವಿಸ್ತರಣೆಗಾಗಿ  ಪ್ರಯೋಗ ಮಾಡಬೇಕಾಗಿದೆ. ಉತ್ತಮ ಗುರುಗಳನ್ನು ಗುರುತಿಸುವವರು ಬೇಕು. ಜ್ಞಾನ ಎಲ್ಲೆಡೆ ಹರಡುತ್ತಿರಬೇಕು. ಜತೆಗೆ ಅದನ್ನು ತಿಳಿಯುವ ಮನಸ್ಸು ಬೇಕು ಎಂದರು.

ಹಿರಿಯ  ವಿದ್ವಾಂಸ ರಾಘವ ನಂಬಿಯಾರ್  ಪ್ರೊ. ಕೆ.ಪಿ ರಾವ್ ಅವರ ಕುರಿತು ಹಾಗೂ ಡಾ. ಚಂದ್ರಾವತಿ  ಡಾ. ಕನರಾಡಿ ವಾದಿರಾಜ ಭಟ್ ಅವರ ಕುರಿತಾಗಿ ಅಭಿನಂದನ ಮಾತುಗಳನ್ನಾಡಿದರು.  ಮುಖ್ಯ ಅತಿಥಿಯಾಗಿ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಾಯತ್ರಿ ಜಿ.ಪೈ ಕಾರ್ಯಕ್ರಮಕ್ಕೆ ಶುಭ ಹಾರಯಿಸಿದರು.  ಕು.ಶಿ ಹರಿದಾಸ ಭಟ್ ಹಾಗೂ ಉಪಾಧ್ಯಾಯ ದಂಪತಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಯಕ್ಷಗಾನ ಕೇಂದ್ರದ ಗುರುಗಳಾದ ಶ್ರೀ ಉಮೇಶ್ ಸುವರ್ಣ ಯಕ್ಷಗಾನ ಪದ್ಯ ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.  ಆರ್.ಆರ್.ಸಿ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.