Wednesday, August 12, 2026

ನಾಡೋಜ ಶ್ರೀ ಕೆ.ಪಿ ರಾವ್ ಅವರಿಗೆ ಡಾ. ಯು.ಪಿ ಉಪಾಧ್ಯಾಯ-ಡಾ. ಸುಶೀಲಾ ಉಪಾಧ್ಯಾಯ ಪ್ರಶಸ್ತಿ

 

ಭಾರತೀಯ ಭಾಷಾ ಗಣಕ ಪಿತಾಮಹ ನಾಡೋಜ ಶ್ರೀ ಕೆ.ಪಿ ರಾವ್ ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಕೊಡಮಾಡುವ ಡಾ. ಯು.ಪಿ ಉಪಾಧ್ಯಾಯ ಮತ್ತು ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬಹುಭಾಷಾ ವಿದ್ವಾಂಸರು, ಹಾಗೂ ತುಳುನಿಘಂಟು ರಚನೆ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಡಾ. ಯು.ಪಿ ಉಪಾಧ್ಯಾಯ ಮತ್ತು ಡಾ.ಸುಶೀಲಾ ಪಿ. ಉಪಾಧ್ಯಾಯ ಅವರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು ರೂ. ಹತ್ತುಸಾವಿರ ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಕಾರ್ಯಕ್ರಮವು ಸೆಪ್ಟಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಶ್ರೀ ಕೆ.ಪಿ ರಾವ್ ಅವರು ೧೯೪೦ರ ಫೆಬ್ರವರಿ ೨೯ರಂದು ಮಂಗಳೂರು ಸಮೀಪದ ಕಿನ್ನಿಕಂಬಳದಲ್ಲಿ ಜನಿಸಿದರು. ೧೯೫೯ರಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಪಡೆದರು. ಮುಂಬಯಿಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ (ಖಿIಈಖ)ನ ಆಣುಶಕ್ತಿ ವಿಭಾಗದಲ್ಲಿ ಸಂಶೋಧಕರಾಗಿ ವೃತ್ತಿಜೀವನ ಆರಂಭಿಸಿದ ಅವರು, ೧೯೭೦ರ ದಶಕದಲ್ಲಿ ಟಾಟಾ ಪ್ರೆಸ್‌ಗೆ ಸೇರ್ಪಡೆಯಾದ ನಂತರ ಅಕ್ಷರ, ಮುದ್ರಣ ಮತ್ತು ಭಾಷಾ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದರು. ಬಳಿಕ ಮಾನೋಟೈಪ್ ಸಂಸ್ಥೆಯ ನಿರ್ದೇಶಕರಾಗಿ, ಕ್ವಾರ್ಕ್ಎಕ್ಸ್ಪ್ರೆಸ್ ಮತ್ತು ಅಡೋಬ್ ಸಿಸ್ಟಂಸ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳ ಸಲಹೆಗಾರರಾಗಿ ಹಾಗೂ ಮಣಿಪಾಲ ಸಮೂಹದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಭಾರತೀಯ ಭಾಷೆಗಳ ಗಣಕೀಕರಣದಲ್ಲಿ ಶ್ರೀ ಕೆ. ಪಿ. ರಾವ್ ಅವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಉಚ್ಚಾರಣಾತ್ಮಕ ತರ್ಕವನ್ನು ಆಧರಿಸಿ ಕೀಲಿಮಣೆ ವಿನ್ಯಾಸ ರೂಪಿಸುವ ಮೂಲಕ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳನ್ನು ಕಂಪ್ಯೂಟರ್‌ನಲ್ಲಿ ಸುಲಭವಾಗಿ ಬಳಸಲು ಸಹಕಾರಿಯಾದರು. ಕನ್ನಡ ಕೀಲಿಮಣೆ ವಿನ್ಯಾಸವನ್ನು ಅಭಿವೃದ್ಧಿಪಡಿಸಿ, ‘ಸೇಡಿಯಾಪು’ ಕನ್ನಡ ಪದಸಂಸ್ಕಾರಕ ತಂತ್ರಾಂಶವನ್ನು ರಚಿಸಿ ಮುಕ್ತ ಬಳಕೆಗೆ ನೀಡಿದರು. ಅವರ ಪ್ರಮುಖ ಕೃತಿ ‘ವರ್ಣಕ’. ಅವರ ಕನ್ನಡ ಕೀಲಿಮಣೆ ವಿನ್ಯಾಸಕ್ಕೆ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸವೆಂಬ ಮಾನ್ಯತೆ ದೊರೆತಿದೆ. ತುಳು ಅಕಾಡೆಮಿ ಸೇರಿದಂತೆ ಹಲವು ಸಂಸ್ಥೆಗಳು ಅವರನ್ನು ಗೌರವಿಸಿದ್ದು, ೨೦೦೯ರ ಆಳ್ವಾಸ್ ನುಡಿಸಿರಿ ಸನ್ಮಾನ, ೨೦೧೩ರ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ೨೦೨೧ರ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಅವರಿಗೆ ಸಂದಿವೆ. ಅವರ ಜೀವನ ಮತ್ತು ಸಾಧನೆಗಳನ್ನು ಕುರಿತು ‘ಕಂಪ್ಯೂಟರ್, ಕನ್ನಡ, ಕೆ. ಪಿ. ರಾವ್’ (೨೦೧೩), ‘ಭಾರತೀಯ ಭಾಷಾ ಗಣಕ ಪಿತಾಮಹ ನಾಡೋಜ ಕೆ. ಪಿ. ರಾವ್’ (೨೦೨೦) ಮತ್ತು ‘ನಾಡೋಜ ಕೆ. ಪಿ. ರಾಯರ ನಾಡಿ, ನಡೆ, ನುಡಿ’ (೨೦೨೦) ಸೇರಿದಂತೆ ಹಲವು ಕೃತಿಗಳು ಪ್ರಕಟವಾಗಿವೆ.


No comments: