Monday, August 24, 2026

ಯಕ್ಷಪೋಷಕ ಗೌರವ ಪ್ರಶಸ್ತಿ ಕಾರ್ಯಕ್ರಮ (ದಿನಾಂಕ: 23.08.2026)

 







ಯಕ್ಷಗಾನ ಕಲಾಕ್ಷೇತ್ರದಲ್ಲಿ ಕಲಾವಿದರು ಬೆಳೆಯಲು ಮೇಳದ ಯಜಮಾನರೂ ಕಾರಣ. ವೈ ಕರುಣಾಕರ ಶೆಟ್ಟಿ ಅವರಿಗೆ ನೀಡಿರುವ ಯಕ್ಷಪೋಷಕ ಗೌರವ ಪ್ರಶಸ್ತಿಯಿಂದ ಈ ಪ್ರಶಸ್ತಿಯ ಗೌರವ ಹೆಚ್ಚಾಗಿದೆ ಎಂದು  ಮಾಹೆ ಸಹಕುಲಾಧಿಪತಿ, ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಇದರ ಅಧ್ಯಕ್ಷರಾದ  ಡಾ. ಎಚ್. ಎಸ್. ಬಲ್ಲಾಳ್ ಹೇಳಿದರು. ಅವರು  ದಿನಾಂಕ: ೨೩.೮.೨೦೨೬ರ ಶನಿವಾರದಂದು ಉಡುಪಿ ಅಜ್ಜರಕಾಡು ಪುರಭವನದಲ್ಲಿ ಯಕ್ಷಗಾನ ಕೇಂದ್ರ, ಇಂದ್ರಾಳಿ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಹಾಗೂ ಉಜ್ವಲ ಡೆವಲಪರ್ಸ್ ಆಶ್ರಯದಲ್ಲಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್(ರಿ.) ಪ್ರಾಯೋಜಿತ ಯಕ್ಷಪೋಷಕ ಗೌರವ ಪ್ರಶಸ್ತಿಯನ್ನು ಯಕ್ಷಗಾನ ಮೇಳಗಳ ಯಜಮಾನರಾದ ವೈ. ಕರುಣಾಕರ ಶೆಟ್ಟಿ  ಅವರಿಗೆ  ಟ್ರಸ್ಟ್ ವತಿಯಿಂದ ಪ್ರದಾನ ಮಾಡಿ ಮಾತನಾಡುತ್ತಿದ್ದರು.  ಕಲಾವಿದರಿಗೆ ಮಾತ್ರವಲ್ಲದೆ ಕಲಾಪೋಷಕರಾದ ಮೇಳದ ಯಜಮಾನರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಬಾರಿ ಬಡಗುತಿಟ್ಟು ಮೇಳದ ಯಜಮಾನರಿಗೆ  ಪ್ರಶಸ್ತಿ ನೀಡಿದರೆ, ಮುಂದಿನ ವರ್ಷ ತೆಂಕುತಿಟ್ಟು ಮೇಳದ ಯಜಮಾನರಿಗೆ ಪ್ರಶಸ್ತಿ ನೀಡಲಾಗುವುದು. ಕಲಾವಿದರು ಬೆಳೆಯಲು ಮೇಳದ ಯಜಮಾನರೂ ಕಾರಣ  ಎಂದರು.

ಯಕ್ಷಗಾನ ಕೇಂದ್ರದ ಸಲಹಾಸಮಿತಿ ಅಧ್ಯಕ್ಷರಾದ ಪಳ್ಳಿ ಕಿಶನ್ ಹೆಗ್ಡೆ ಮಾತನಾಡಿ,  ಇಂದು ಯಕ್ಷಗಾನ ನಡೆಸುವುದು ಕಷ್ಟದ ಕೆಲಸ. ಡೇರೆ ಮೇಳಗಳ ಉಳಿವು ಪ್ರೇಕ್ಷಕರ ಕೈಯಲ್ಲಿದೆ. ಯಕ್ಷಗಾನ ಮೇಳಗಳ ಯಜಮಾನರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಉತ್ತಮ ಕಾರ್ಯ ಎಂದರು. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ ಜಿ.ಶಂಕರ್ ಮಾತನಾಡಿ ಕಲಾವಿದರು ಅಪಾರ್ಥ ಸಂಭಾಷಣೆ ಮಾಡಬಾರದು. ತೆಂಕುತಿಟ್ಟಿನ ಮೇಳದ ಯಜಮಾನರನ್ನೂ ಗುರುತಿಸಿ ಗೌರವಿಸುವ ಕೆಲಸವಾಗಬೇಕು ಎಂದರು. ವೇದಿಕೆಯಲ್ಲಿ ಉಜ್ವಲ ಡೆವಲಪರ್ಸಿನ ಎಂ.ಡಿ ಪುರುಷೋತ್ತಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ನಾಗರಾಜ ಶಂಕರನಾರಾಯಣ ಗಣಪತಿ ಸ್ತುತಿಯೊಂದಿಗೆ ಪ್ರಾರ್ಥಿಸಿದರು. ಶ್ರೀ ಭುವನ ಪ್ರಸಾದ್ ಹೆಗ್ಡೆ ಪ್ರಶಸ್ತಿ ಪತ್ರ ವಾಚಿಸಿದರು. ಇಂದ್ರಾಳಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು.  ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಶಿವಕುಮಾರ್ ಅಳಗೋಡು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಒಗ್ಗೂಡುವಿಕೆಯಲ್ಲಿ ‘ಕೃಷ್ಣಾರ್ಜುನ ಕಾಳಗ’ ಯಕ್ಷಗಾನ ಪ್ರದರ್ಶನಗೊಂಡಿತು.

No comments: