ಪೊಳಲಿ ಶೀನಪ್ಪ ಹೆಗ್ಡೆಯವರ ಬದುಕು ಮತ್ತು ಬರಹಗಳು ಎಂದೂ ಮಾದರಿಯಾಗಿರುವಂತದ್ದು. ಸ್ವಾತಂತ್ರ ಪೂರ್ವದಿಂದಲೇ ಅವರು ತುಳುನಾಡಿನ ಕುರಿತು ಅನೇಕ ಸಂಶೋಧನೆ ನಡೆಸಿ ಕೃತಿಗಳನ್ನು ನೀಡಿದವರು. ಆ ಸಂದರ್ಭದಲ್ಲಿ ಅವರು ಅನೇಕ ಹೊಳಹುಗಳನ್ನು ನೀಡಿ ಮುಂದಿನ ಅಧ್ಯಯನಕಾರರಿಗೆ ದಾರಿದೀಪವಾದರು ಎಂದು ಪ್ರೊ. ಬಿ. ಎ ವಿವೇಕ ರೈ ಹೇಳಿದರು. ಅವರು ದಿನಾಂಕ:೨೦.೦೬.೨೦೨೬ರಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್‌ಎಜುಕೇಶನ್, ಚೇಳ್ಯಾರು ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಕೊಡಮಾಡುವ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್ ಹೆಗ್ಗಡೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಗದ್ಯರೂಪದಲ್ಲಿ ತುಳುನಾಡಿನ ಜನಪದ ಸಂಪತ್ತನ್ನು ಮುಖ್ಯವಾಗಿ ಪಾಡ್ದನದ ಕಥೆಗಳನ್ನು ಸಂಗ್ರಹಿಸಿ ಜಾನಪದ ಅದ್ಯಯನಕಾರರಿಗೆ ಮಾರ್ಗದರ್ಶಿ ಸೂತ್ರವನ್ನು ಹೆಣೆದರು. ಅವರಿಗೆ ತುಳುನಾಡಿನ ವ್ಯಾಪಕವಾದ ಸಂಸ್ಕೃತಿ, ಆಚಾರ ವಿಚಾರಗಳ ಕುರಿತು ಪರಿಚಯವಿತ್ತು. ಇಂದಿನ ದಿನಗಳಲ್ಲಿ ಓದು, ಸಂಶೋಧನೆಗಳು ದೂರ ಸರಿಯುತ್ತಿವೆ. ವಿಸ್ತಾರವಾದ ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳಷ್ಟೇ ನಿಜ ಸತ್ಯದರ್ಶನ ಮಾಡಿಸಬಲ್ಲವು. ಆಳ ಅಧ್ಯಯನಗಳನ್ನು ಅಪೇಕ್ಷೆಪಡುವ ಇಂತಹ ಕ್ಷೇತ್ರಗಳು ಇಂದು ಬಡವಾಗುತ್ತಿರುವುದು ಖೇದನೀಯ ಎಂದರು.
ಪ್ರಶಸ್ತಿಯನ್ನು ಸ್ವೀಕರಿಸಿದ ಹಿರಿಯ ಲೇಖಕ, ಸಂಶೋಧಕರಾದ ಡಾ. ಬಿ. ಶಿವರಾಮ ಶೆಟ್ಟಿ ಅವರು ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು. ಸಂಶೋಧನೆ ಎಂದರೆ ಹೊಸತನ್ನು ಹೇಳುವುದಲ್ಲ ಇಲ್ಲದ್ದನ್ನೂ ಹೇಳುವುದಲ್ಲ, ಬದಲು ಆಳವಾದ ಅಭ್ಯಾಸದ ಫಲವಾಗಿ ಒಡಮೂಡುವ ವಿಶಿಷ್ಟ ಸತ್ಯ. ಆ ಬಗೆಯ ಸತ್ಯದ ಹೊಳಹುಗಳಿಗೆ ಕಾಲಾತೀತವಾಗಿ ಎಂದೂ ಸಮಸ್ಯೆಗಳು ಬರುವುದಿಲ್ಲ. ಅಂತಹ ಅಧ್ಯಯನಗಳು ಪರಾಂಬರಿಸಿ ನೋಡುವುದರಿಂದ ಸಾಧ್ಯವಾಗುತ್ತದೆ ಎಂದರು. ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಚೇತನ್ ಮುಂಡಾಜೆ ಅವರು ಪ್ರಶಸ್ತಿ ಪುರಸ್ಕೃತರ ಕುರಿತಾಗಿ ಅಭಿನಂದನಾ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಎಂ.ಜಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಾಯತ್ರಿ ಜಿ. ಪೈ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರಶಸ್ತಿಯ ಪ್ರಾಯೋಜಕರಾದ ಡಾ. ಇಂದಿರಾ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ನಾಗರಾಜ ಶಂಕರನಾರಾಯಣ ಪ್ರಾರ್ಥಿಸಿದರು. ಆರ್.ಆರ್.ಸಿಯ ಸಹಸಂಶೋಧಕ ಡಾ. ಅರುಣ್‌ಕುಮಾರ್‌ಎಸ್.ಆರ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
No comments:
Post a Comment