
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಮಣಿಪಾಲ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯು ಬೆಂಗಳೂರಿನಲ್ಲಿ ವೈದ್ಯರಾಗಿರುವ ಡಾ. ಲಕ್ಷ್ಮಣ ವಿ.ಎ ಅವರ “ಗೋಡೆಗೆ ನೇತುಬಿದ್ದ ಭೂಪಟ’ ಕವನಸಂಕಲನಕ್ಕೆ ಲಭಿಸಿದೆ. ಪ್ರಶಸ್ತಿಯು ೧೦೦೦೦/- ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಪ್ರಶಸ್ತಿಪ್ರದಾನ ಕಾರ್ಯಕ್ರಮವು ಆಗಸ್ಟ್ ತಿಂಗಳಲ್ಲಿ ನಡೆಯಲಿದೆ ಎಂದು
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ ಜಗದೀಶ್ ಶೆಟ್ಟಿ ಪತ್ರಿಕಾ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ಲಕ್ಷ್ಮಣ ವಿ.ಎ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ (ಈಗಿನ ಕಾಗವಾಡ) ತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಓದು, ಕವನಸಂಕಲನ, ಗದ್ಯ ಮತ್ತು ಅಂಕಣ ಬರಹಗಳಲ್ಲಿ ವಿಶೇಷ ಆಸಕ್ತಿಯನ್ನು ಹವ್ಯಾಸವಾಗಿಸಿಕೊಂಡಿರುವ ಲಕ್ಷ್ಮಣ್ ಅವರು ಹಲವಾರು ಕವನ ಸಂಕಲವನ್ನು ಪ್ರಕಟಿಸಿದ್ದಾರೆ. ‘ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ” ಇವರ ಪ್ರಥಮ ಕವನ ಸಂಕಲನ. ಅಪ್ಪನ ಅಂಗಿ, ಗರ್ದಿ ಗಮ್ಮತ್ತು’, “ನೋಡಾ ಗೋಳ ಗುಮ್ಮಟ ನೋಡಾ’, “ಮಿಲ್ಟ್ರಿ ಟ್ರಂಕು”, “ಕಾಯಿನ್ ಬೂತ್”, “ಪರಿಮಳದ ಬಾಕಿ ಮೊತ್ತ”, ಮುಂತಾದುವು ಇವರ ಪ್ರಕಟಿತ ಕವನ ಸಂಕಲನಗಳು. ಬಂಡೆ ಬಸಪ್ಪನ ದೊಡ್ಡಿ ಎಂಬ ಕಥೆಯ ಬೆಳಗಾವಿಯ ರಾಣಿ ಚೆನ್ನಮ್ಮ ಮಹಿಳಾ ವಿ.ವಿ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಬಸಣ್ಣನ ಸರ್ತಿ ಸೈಕಲ್ ಕಥೆ ಮಂಗಳೂರು ವಿ.ವಿ, ಆಳ್ವಾಸ್ ವಿ.ವಿಯ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ಕವನಸಂಕಲನಗಳಿಗೆ ಕಣವಿ ಕಾವ್ಯ ಪ್ರಶಸ್ತಿ, ವೀಚಿ ಪ್ರಶಸ್ತಿ, ವಿಭಾ ಕಾವ್ಯ ಪ್ರಶಸ್ತಿ, ಅಡ್ವೈಜರ್ ಪ್ರಶಸ್ತಿ, ಸವದತ್ತಿ ಸಹೃದಯ ಕಾವ್ಯ ಪ್ರಶಸ್ತಿ, ಈ ಹೊತ್ತಿಗೆ ಕಾವ್ಯ ಪುರಸ್ಕಾರಗಳಲ್ಲದೆ ಹಲವಾರು ದತ್ತಿ ಬಹುಮಾನಗಳು ಲಭಿಸಿವೆ. ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಅಂಕಣ ಬರಹ, ಕತೆ, ಕವನ, ವೈಚಾರಿಕ ಬರಹ, ಪ್ರಬಂಧ ಬರಹ ಹಾಗೂ ಅನುಭವ ಕಥನಗಳು ಪ್ರಕಟವಾಗಿವೆ. ಪಿ.ಎಚ್.ಸಿ ಕವಲುಗುಡ್ಡ ಅವರ ಇತ್ತೀಚಿನ ಕಾದಂಬರಿ, ಅಲ್ಲದೆ 'ನಸುಕು' (nasuku.com) ವೆಬ್‌ಸೈಟ್‌ನ ಸಂಪಾದಕತ್ವದಲ್ಲಿ ಸಕ್ರಿಯರಾಗಿದ್ದಾರೆ.
No comments:
Post a Comment