Friday, February 13, 2026

ಫೆಬ್ರವರಿ ೧೩, ೨೦೨೬ರಂದು ನಡೆದ ಪ್ರೊ. ಎಸ್.ವಿ ಪರಮೇಶ್ವರ ಭಟ್ಟ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ವರದಿ

 







             

                         ಕವಿತೆಗಳೇ ನನ್ನ ಮಾಧ್ಯಮ ; ಸುಬ್ರಾಯ ಚೊಕ್ಕಾಡಿ

ಸೂಕ್ಷ್ಮವಾಗಿ ದೊಡ್ಡ ಸಂಗತಿಗಳನ್ನೂ ಸಂಕ್ಷಿಪ್ತವಾಗಿ ಕವಿತೆಗಳಲ್ಲಿ ಹೇಳಬಹುದು. ಯಾರನ್ನಾದರೂ ಸೂಕ್ಷ್ಮವಾಗಿ ಟೀಕಿಸಲೂ ಅದರ ಮೂಲಕ ಸಾಧ್ಯ. ಹಾಗಾಗಿ ಕವಿತೆಗಳೇ ನನ್ನ ಮಾಧ್ಯಮ, ಕವಿತೆಗಳ ಮೂಲಕ ನಾನು ನನ್ನ ಸುತ್ತಲಿನ ಜಗತ್ತಿಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಹೇಳಿದರು. ಅವರು ದಿನಾಂಕ: ೧೩.೦೨.೨೦೨೬ರಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಮಾಹೆ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ಸಮಿತಿ, ಮಂಗಳೂರು ಇವರ ಸಹಯೋಗದಲ್ಲಿ ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ನಡೆದ ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು. ಮರ ಮತ್ತು ಹಕ್ಕಿಯ ರೂಪಕಗಳನ್ನು ನನ್ನ ಕವಿತೆಗಳಲ್ಲಿ ಕಾಣಬಹುದು. ಮರವು ಇಡೀ ಜಗತ್ತನ್ನು ಪ್ರತಿನಿಧಿಸುತ್ತದೆ. ಹಕ್ಕಿ ಇಡೀ ಜಗತ್ತನ್ನು ಸುತ್ತತ್ತದೆ. ವ್ಯಕ್ತಿಯ ಶಕ್ತಿ ಮತ್ತು ಮಿತಿಯನ್ನು ಮರ ಮತ್ತು ಹಕ್ಕಿ ಸಾಂಕೇತಿಸುತ್ತದೆ ಎಂದರು. ಕೆಲಸದ ಒತ್ತಡ, ಏಕಾಂಗಿತನ, ಅವಮಾನ, ಇವೆಲ್ಲವುಗಳಿಗೂ ಬರವಣಿಗೆಯ ಬಿಡುಗಡೆಯ ಭಾವ ನೀಡುತ್ತದೆ. ನನ್ನೊಳಗಿನ ತಲ್ಲಣ, ಬೆಡಗು, ಬೆರಗು ಎಲ್ಲವೂ ಸೇರಿ ನನಗೆ ಇಷ್ಟವಾದದ್ದನ್ನಷ್ಟೆ ಬರೆಯುತ್ತೇನೆ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ‘ಕಲೆ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಯುವಜನತೆಯಲ್ಲಿ ಆಸಕ್ತಿ ಮೂಡಿಸಿದರಷ್ಟೇ ಮುಂದಿನ ದಿನಗಳಲ್ಲಿ ಅವುಗಳು ಉಳಿಯಲು ಸಾಧ್ಯ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಡಾ. ಬಿ. ಎ.ವಿವೇಕ ರೈ ಅವರು ಮಾತನಾಡಿ, ಮೌಲ್ಯಗಳು ಮತ್ತು ಕೌಟುಂಬಿಕ ಸಂಬಂಧಗಳು ಉಳಿಯಬೇಕು, ಬೆಳೆಯಬೇಕು, ಸಂಕೇತಾಕ್ಷರಗಳ ಸಂವಹನದ ಅಹಂಕಾರ ನಡೆಯದು. ಆನಂದ, ಚಿಂತನೆಯ ಮಾರ್ಗೋಪಾಯ ಕಾವ್ಯ, ಸಾಹಿತ್ಯದಲ್ಲಿದೆ. ಕಾವ್ಯಕ್ಕೆ ಸಾವಿಲ್ಲ, ಪ್ರೀತಿ ಸಂಸ್ಕöÈತಿಯಿಂದ ನಾಡು ಕಟ್ಟಲು ಸಾಧ್ಯ. ಆಧುನಿಕತೆಯ ಸೌಕರ್ಯ ಅನುಭವಿಸಿ ಬೇಸತ್ತು ವಿಮುಕ್ತಿ ಹೊಂದಲು ಕಲೆ, ಸಾಹಿತ್ಯದಿಂದ ಮಾತ್ರ ಸಾಧ್ಯ. ಕವಿಗೆ ಕವಿ ಮುನಿಯುವ ಬದಲು ಮಣಿಯುವ ಸಂಸ್ಕöÈತಿ ಬೆಳೆಯಬೇಕು. ಒಬ್ಬ ಸಾಹಿತಿಯು ಇನ್ನೊಬ್ಬ ಸಾಹಿತಿಯನ್ನು ಗೌರವಿಸುವ, ಪ್ರೀತಿಸುವ ಪರಂಪರೆಯನ್ನು ಇಂದು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದರು.  ಧ್ಯಾನಸ್ಥ ಸ್ಥಿತಿಯಲ್ಲಿ ಭಾಷೆಗೆ ಆಕರ ನೀಡುವುದೇ ಕಾವ್ಯವಾಗಿದೆ. ಕಾವ್ಯವನ್ನು ಓದಬೇಕೆನ್ನುವ ಆಸೆ ಪಡುವ ಕಾಲ ಮುಂದೆ ಬರಬಹುದು. ಕಾವ್ಯವು ಮನ:ಶಾಂತಿಯ ಮಾರ್ಗೋಪಾಯವಾಗಿದೆ, ಜೊತೆಗೆ ನಮ್ಮನ್ನು ಚಿಂತನೆಗೂ ಹೆಚ್ಚುತ್ತದೆ ಎಂದು ಪ್ರತಿಪಾದಿಸಿದರು.

ಹಿರಿಯ ಸಾಹಿತಿಗಳಾದ  ಡಾ. ನಾ ದಾಮೋದರ ಶೆಟ್ಟಿ ಅವರು ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ಭಾಷಣ ಮಾಡಿ ‘ಸುಬ್ರಾಯ ಚೊಕ್ಕಾಡಿ ಅವರು ಕೇವಲ ಕವಿತೆಗಳಿಗಷ್ಟೇ ಸೀಮಿತವಾಗಿಲ್ಲ, ಅವರೊಬ್ಬ ವಿಮರ್ಶಕ, ನಾಟಕಕಾರ ಹಾಗೂ ನಟರೂ ಹೌದು. ಅವರ ಚಿಂತನೆಯ ಕ್ರಮ ಪುರೋಗಾಮಿಯಾಗಿತ್ತು ಎಂದು ಹೇಳಿದರು. ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮಯ್ಯ, ಎಸ್.ವಿ ಪರಮೇಶ್ವರ ಭಟ್ಟ ಅವರ ಮಗ ಎಸ್.ಪಿ ರಾಮಚಂದ್ರ ಮತ್ತು ಅವರ ಬಂಧುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಆರಂಭದಲ್ಲಿ ಹಿರಿಯ ಸಂಗೀತ ವಿದ್ವಾಂಸರಾದ ಶ್ರೀ ಕೆ. ಆರ್. ರಾಘವೇಂದ್ರ ಆಚಾರ್ಯ ಮತ್ತು ಬಳಗದವರಿಂದ ಎಸ್.ವಿ ಪರಮೇಶ್ವರ ಭಟ್ಟ ಹಾಗೂ ಸುಬ್ರಾಯ ಚೊಕ್ಕಾಡಿ ಅವರ ಸುಮಧುರ ಭಾವಗೀತೆಗಳ ಪ್ರಸ್ತುತಿ ನಡೆಯಿತು.  ಎಸ್.ವಿ ಪರಮೇಶ್ವರ ಭಟ್ಟ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ರಾಷ್ಟಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ನಿವೃತ್ತ ಪ್ರಾಧ್ಯಾಪಕರಾದ ಡಾ. ಆರ್. ನರಸಿಂಹ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಆರ್.ಸಿಯ ಸಹ ಸಂಶೋಧಕರಾದ ಡಾ. ಅರುಣ್ ಕುಮಾರ್ ಎಸ್.ಆರ್ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು. 

No comments: