ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ನೀಡುವ ಶ್ರೀಮತಿ ಟಿ. ವಿಮಲಾ ವಿ. ಪೈ ಪ್ರಾಯೋಜಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಯ ಆಯ್ಕೆ ಸಮಿತಿಯು 2025ನೇ ಸಾಲಿನ ಪ್ರಶಸ್ತಿಗೆ ಡಾ. ಎಂ. ಎಸ್. ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು ಶ್ರೀ ಟಿ.ವಿ ಮೋಹನ್ದಾಸ್ ಪೈ ಅವರು ಸ್ಥಾಪಿಸಿದ್ದು, ಪ್ರಶಸ್ತಿಯು ೧.೦೦ ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಡಿಸೆಂಬರ್ ತಿಂಗಳ ಮೊದಲವಾರದಲ್ಲಿ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿರಿಯ ಪುರಾತತ್ವಜ್ಞ ಹಾಗೂ ಶಾಸನಶಾಸ್ತ್ರ ತಜ್ಞರೂ ಆದ ಡಾ. ಎಂ. ಎಸ್. ಕೃಷ್ಣಮೂರ್ತಿ ೧೯೪೫ರಲ್ಲಿ ಮೈಸೂರಿನಲ್ಲಿ ಜನಿಸಿದರು. ಎಂ.ಎ., ಪಿಎಚ್.ಡಿ., ಎಪಿಗ್ರಫಿ ಡಿಪ್ಲೊಮಾ ಪದವೀಧರರು. ಐದು ದಶಕಗಳಿಗೂ ಹೆಚ್ಚು ಕಾಲ ಇತಿಹಾಸ ಮತ್ತು ಉತ್ಖನನ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುತ್ತಾರೆ. ಭಾರತೀಯ ದೇವಾಲಯ ವಾಸ್ತುಶಿಲ್ಪ ಮತ್ತು ಶಿಲ್ಪಕಲೆ, ಪ್ರಾಚೀನ ಹಾಗೂ ಮಧ್ಯಕಾಲೀನ ಪುರಾತತ್ವ ಉತ್ಖನನಗಳು ಮತ್ತು ಶಾಸನಗಳ ಅಧ್ಯಯನ ಇವರ ವಿಶೇಷ ಕ್ಷೇತ್ರಗಳು. ಇವರ ಮಾರ್ಗದರ್ಶನದಲ್ಲಿ ಹತ್ತು ಸಂಶೋಧನ ವಿದ್ಯಾರ್ಥಿಗಳು ಪಿಎಚ್.ಡಿ. ಪದವಿ ಪಡೆದಿದ್ದಾರೆ. ಇವರು ಹತ್ತಕ್ಕೂ ಹೆಚ್ಚು ಪುಸ್ತಕಗಳು ಮತ್ತು ೧೩೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ; ಮೈಸೂರು, ಧಾರವಾಡ, ಬೆಂಗಳೂರು, ತಿರುಪತಿ, ತುಮಕೂರು ಸೇರಿದಂತೆ ೯೫ಕ್ಕೂ ಹೆಚ್ಚು ಸ್ಥಳಗಳಲ್ಲಿ ವಿಚಾರ ಸಂಕಿರಣ ಹಾಗೂ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಕರ್ನಾಟಕದಲ್ಲಿ ಬೌದ್ಧಕಲೆ ಮತ್ತು ಸಂಸ್ಕೃತಿ ಅಲ್ಲದೆ ಹಲವು ಇತಿಹಾಸ ಮತ್ತು ಪುರಾತತ್ವಕ್ಕೆ ಸಂಬಂಧಿಸಿದ ಸಂಸ್ಥೆಗಳ ಅಜೀವ ಸದಸ್ಯರಾಗಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಅಧ್ಯಕ್ಷರಾಗಿ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ ಸದಸ್ಯರಾಗಿ, ವಿವಿಧ ವಿಶ್ವವಿದ್ಯಾನಿಲಯಗಳ ಅಧ್ಯಯನ ಮಂಡಳಿ ಹಾಗೂ ನೇಮಕಾತಿ ಮಂಡಳಿಗಳ ಅಧ್ಯಕ್ಷರಾಗಿ/ಸದಸ್ಯರಾಗಿ/ವಿಷಯ ತಜ್ಞರಾಗಿ, ವಿವಿಧ ರಾಜ್ಯಗಳ ಲೋಕಸೇವಾ ಆಯೋಗಗಳ ಪರೀಕ್ಷಾ ಮಂಡಳಿಗಳ ಅಧ್ಯಕ್ಷರಾಗಿ/ ಸದಸ್ಯರಾಗಿ, ಕೇಂದ್ರ ಪುರಾತತ್ವ ಸಲಹಾ ಮಂಡಳಿಯ (CABA) ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (NIAS)ನಲ್ಲಿ ಗೌರವ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು; ಮಿಥಿಕ್ ಸೊಸೈಟಿಯ ‘ಭಾರತದ ಇತಿಹಾಸ ಮತ್ತು ಸಂಸ್ಕೃತಿ’ ಸರಣಿಯ ಸಲಹಾ ಮಂಡಳಿಯ ಸದಸ್ಯರಾಗಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಶ್ರವ್ಯ–ದೃಶ್ಯ ಸಂಶೋಧನಾ ಕೇಂದ್ರದಲ್ಲಿ ವಿಷಯ ತಜ್ಞರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇವರ ಪ್ರಮುಖ ಕೃತಿಗಳಲ್ಲಿ ‘ನೊಳಂಬರು’ ‘ತಲಕಾಡಿನ ಪುರಾತತ್ವ ಉತ್ಖನನಗಳು’ ‘ಅಣ್ಣಿಗೇರಿಯ ಪುರಾತತ್ವ ಉತ್ಖನನ – ವರದಿ’, ಇತ್ಯಾದಿ ಅವರ ಪ್ರಮುಖ ಕೃತಿಗಳು, ಭಾರತೀಯ ನಾಣ್ಯಶಾಸ್ತ್ರ ಸೊಸೈಟಿಯ (ವಾರಣಾಸಿ) ಪತ್ರಿಕೆಯ ಸಂಪಾದಕರಾಗಿ ಸಂಪುಟ LIV (೧೯೯೨)ರಿಂದ LXII ಮತ್ತು LXIII (೨೦೦೦, ೨೦೦೧)ರವರೆಗೆ, ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ವಿಭಾಗದ ‘ಜರ್ನಲ್ ಆಫ್ ಆರ್ಕಿಯಲಾಜಿಕಲ್ ಸ್ಟಡೀಸ್’ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯವನ್ನು ನಿರ್ವಹಿಸಿದ್ದಾರೆ. ಇವರಿಗೆ ೨೦೦೯–೨೦೧೧ರ ಅವಧಿಗೆ ಯು.ಜಿ.ಸಿ. ಎಮೆರಿಟಸ್ ಫೆಲೋಶಿಪ್ ಲಭಿಸಿದೆ. ಕರ್ನಾಟಕ ಇತಿಹಾಸ ಅಕಾಡೆಮಿಯ ೨೪ನೇ ವಾರ್ಷಿಕ ಸಮ್ಮೇಳನದ (ಆದಿಚುಂಚನಗಿರಿ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ; ೧೩–೧೫ ನವೆಂಬರ್ ೨೦೧೦) ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನೊಳಂಬ ಇತಿಹಾಸ ಪ್ರಶಸ್ತಿ ಮತ್ತು ‘ನೊಳಂಬ ಶ್ರೀ’ ಬಿರುದು, ಸೋದೆ ಸದಾಶಿವರಾಯ ಪ್ರಶಸ್ತಿ ಹಾಗೂ ಚಿದಾನಂದ ಪ್ರಶಸ್ತಿ (೨೦೨೦) ಇವರಿಗೆ ಸಂದಿವೆ. ಆಯ್ಕೆ ಸಮಿತಿಯ ಸದಸ್ಯರಾದ ಡಾ. ತಾಳ್ತಜೆ ವಸಂತ ಕುಮಾರ್, ಡಾ. ಕೆ. ಚಿನ್ನಪ್ಪ ಗೌಡ, ಡಾ. ಪ್ರಭಾಕರ ಜೋಶಿ, ಡಾ. ಕಿಶೋರಿ ನಾಯಕ್, ಡಾ. ಎಸ್.ವಿ ಪಾಡೀಗಾರ್ ಸಹಕರಿಸಿದ್ದಾರೆ.

No comments:
Post a Comment