Wednesday, November 4, 2026

ಕನಕ ಚಿಂತನ-ವಿಶೇಷ ಉಪನ್ಯಾಸ ಮಾಲಿಕೆ, ಹಿರಿಯ ನಾಗರಿಕರ ಸಂಘ (ರಿ.,) ಬ್ರಹ್ಮಾವರ (ದಿನಾಂಕ: 03.11.2026)

 




ಕನಕ ಸಾಹಿತ್ಯದಲ್ಲಿ ಮನೋವಿಕಾಸಕ್ಕೆ ಹಲವು ನೆಲೆಗಳಿವೆ. ಕನಕದಾಸರ ಏಕನೆಲೆ ಕಾಗಿನೆಲೆಯಾದರೂ, ದೇವರು, ಭಕ್ತಿ, ಕರ್ಮ ಹೀಗೆ ಹಲವು ಸ್ತರಗಳಲ್ಲಿ ಭಾವನಾತ್ಮಕವಾಗಿ, ಸಂತುಲಿತ ಹಾಗೂ ಸಮತೋಲಿತವಾಗಿ ಭಾವವಿಕಾಸದ ಜೊತೆಗೆ ಆತ್ಮವಿಕಾಸದ ಪಥವನ್ನು ತೆರೆದುತೋರಿದ್ದಕ್ಕಾಗಿ ಕನಕದಾಸರು ಮುಖ್ಯರಾಗುತ್ತಾರೆ. ಅವರು ಸಂವಹನಕ್ಕಾಗಿ ಬಳಸಿಕೊಂಡ ಮಾಧ್ಯಮ ಗೇಯಪ್ರಕಾರ. ನಳಚರಿತ್ರೆ ಮನುಷ್ಯನ ಅಹಂ ನಿರಸನದ ವಿಕಾಸದ ಚಿತ್ರಣವಾದರೆ, ಮೋಹನ ತರಂಗಿಣಿ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಕೃಷ್ಣನೇ ಸರ್ವಶ್ರೇಷ್ಠ ಎಂದೆನ್ನುವ ಕಾವ್ಯ. ಕೃಷ್ಣನೇ ಸರ್ವಸ್ವ ಎಂಬುದಾಗಿ ಹರಿಭಕ್ತಿ ಸಾರ ಸಾರಿದರೆ, ರಾಮಧಾನ್ಯ ಚರಿತ್ರೆ ಮೇಲರಿಮೆ ಮತ್ತು ಕೀಳರಿಮೆಗಳ ತೊಡೆಯುವಿಕೆಯೇ ವಿಕಾಸ ಪಥದ ಹಾದಿಗೆ ಮೆಟ್ಟಿಲಾಗುವಿಕೆ ಎಂಬುದನ್ನು ತಿಳಿಯಪಡಿಸುವ ಕಾವ್ಯ ಎಂಬುದಾಗಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಯೋಗೀಶ್ ಕೈರೋಡಿ ಹೇಳಿದರು. ಅವರು ದಿನಾಂಕ:೩.೧೧.೨೦೨೬, ಮಂಗಳವಾರದಂದು, ಉಡುಪಿಯ ಕನಕದಾಸ ಅಧ್ಯಯನ ಸಂಶೋಧನ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್  ಹಾಗೂ ಹಿರಿಯ ನಾಗರಿಕರ ಸಂಘ (ರಿ.) ಬ್ರಹ್ಮಾವರ ಇವರ ಸಹಯೋಗದಲ್ಲಿ ಬ್ರಹ್ಮಾವರದಲ್ಲಿ ನಡೆದ ಕನಕ ಚಿಂತನ-ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ  ಕನಕ ಸಾಹಿತ್ಯದಲ್ಲಿ ಮನೋವಿಕಾಸದ ನೆಲೆಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ಅಜ್ಞಾನ, ತಾರತಮ್ಯ ಬದಿಗೆ ಸರಿಸಿ, ಕೃಷ್ಣನೇ ಸರ್ವಶ್ರೇಷ್ಟ ಎಂಬುದಾಗಿ ಸಾರಿ ಬದುಕನ್ನು  ಸಂಪೂರ್ಣವಾಗಿ ಚಿಂತನೆಗೆ ಒಳಪಡಿಸಿದ ಕನಕದಾಸರು ಸಾರ್ವಕಾಲಿಕ ಶ್ರೇಷ್ಠ ಸಂತ ಎಂಬುದಾಗಿ ಅವರು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ನಾಗರಿಕರ ಸಂಘ (ರಿ.) ಬ್ರಹ್ಮಾವರ ಇದರ ಅಧ್ಯಕ್ಷರಾದ ಪ್ರೊ. ಜಿ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕನಕದಾಸರ ಪ್ರತಿಯೊಂದು ಚಿಂತನೆಗಳು ಇಂದಿಗೂ ಪ್ರಸ್ತುತ, ಅನುಸರಿಸಿ, ಅನುಭವಿಸಿದರೆ ಬದುಕು ಬಂಗಾರವಾಗುವುದರಲ್ಲಿ ಸಂಶಯವಿಲ್ಲವೆಂದರು. ಶ್ರೀ ವಸಂತ ಶೆಟ್ಟಿ ಕನಕ ಕೀರ್ತನೆ ಹಾಡಿದರು. ಕನಕದಾಸ ಅಧ್ಯಯನ ಸಂಶೋಧನ ಪೀಠದ ಸಲಹಾ ಸಮಿತಿ ಸದಸ್ಯರಾದ ಡಾ. ಅರುಣ್ ಕುಮಾರ್ ಎಸ್.ಆರ್. ಉಪಸ್ಥಿತರಿದ್ದರು.

ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಹರೀಂದ್ರನಾಥ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಅಲ್ಫೊನ್ಸ್ ಡಿಸೋಜ ವಂದಿಸಿದರು.  ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಸಂಕಯ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದದರು.  

No comments: