ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ÷್ಯವನ್ನು ಕಾಪಾಡುವುದರ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಂಡುಕೊಳ್ಳಬಹುದು. ಮಾತು ಸ್ಪಷ್ಟವಾಗಿದ್ದರೆ ಅದು ಅವರ ಆರೋಗ್ಯವನ್ನು ಪ್ರತಿಫಲಿಸುತ್ತದೆ. ಸಾಮಾನ್ಯವಾಗಿ ವಿಜಯನಗರ ಅರಸರ ಆಡಳಿತದ ಕಾಲವನ್ನು ಸುವರ್ಣಯುಗ ಎಂದು ಕರೆಯುತ್ತಿದ್ದರು. ಅಂದರೆ ಆ ಕಾಲದ ಸಾಮಾಜಿಕ ವ್ಯವಸ್ಥೆ ಹಾಗೂ ಸಂಬಂಧಗಳು ಮಾನವೀಯ ಮುಖವನ್ನು ಹೊಂದಿದ್ದುವು ಎಂದು ಅರ್ಥ. ದೇಹವೆಂಬುದು ಆತ್ಮದ ವಾಹನ. ದೇಹ ಶಾಶ್ವತವಲ್ಲ. ಕುಲ, ಭಾಷೆ, ಆಚಾರವಿಚಾರಗಳು ನಮ್ಮನ್ನು ಬೆಂಬಿಡದೆ ಬರುತ್ತವೆ. ಅವನ್ನೆಲ್ಲಾ ನಿವಾರಿಸಿಕೊಂಡು ಮುನ್ನಡೆದು ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳುವ ಪರಿಯನ್ನು ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಭಿನ್ನವಿಸಿಕೊಂಡರು. ಅವರ ‘ಕುಲಕುಲವೆನ್ನುತಿಹರು’ ಎಂಬ ಕೀರ್ತನೆಯಲ್ಲಿ ಇತರರ ಹಿತವನ್ನು ಬಯಸುವವನೇ ನಿಜವಾದ ಮನುಷ್ಯ ಎಂಬುದಾಗಿ ಪ್ರತಿಪಾದಿಸುತ್ತಾರೆ. ಮಾತು ನಿರ್ಮಲವಾಗಿರಬೇಕು ಇಲ್ಲವಾದರೆ ಅದೊಂದು ಕಡ್ಡಿ ತಿನಿಸು ಎಂಬ ಅವರ ಚಿಂತನೆಗಳು ಸಾರ್ವಕಾಲಿಕ ಯೋಗ್ಯ ಎಂಬುದಾಗಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಹರೀಶ್ ಟಿ.ಜಿ ಹೇಳಿದರು. ಅವರು ದಿನಾಂಕ: ೨೩.೧೦.೨೦೨೬, ಬುಧವಾರದಂದು, ಎಸ್.ಎಂ.ಎಸ್.ಕಾಲೇಜಿನ ಸಭಾಂಗಣದಲ್ಲಿ, ಕನಕದಾಸ ಅಧ್ಯಯನ ಸಂಶೋಧನ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಎಸ್.ಎಂ.ಎಸ್. ಕಾಲೇಜು, ಬ್ರಹ್ಮಾವರ ಇವರ ಸಹಯೋದಲ್ಲಿ ನಡೆದ ಕನಕ ಚಿಂತನ-ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಕನಕ ಸಾಹಿತ್ಯದಲ್ಲಿ ಸಾಮಾಜಿಕ ಸ್ವಾಸ್ಥ್ಯ ಚಿಂತನೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಎಸ್.ಎಂ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರಾಡ್ರಿಗಸ್ ಮಾತನಾಡಿ ಸಮಾಜದ ಸ್ವಾಸ್ಥ್ಯವಿರುವುದು ಸಹಬಾಳ್ವೆ, ಸಹಕಾರ ಹಾಗೂ ಪರಸ್ಪರ ಅರ್ಥಮಾಡಿಕೊಳ್ಳುವಿಕೆಯಲ್ಲಿ ಇರುತ್ತದೆ. ಹಿರಿಯರನ್ನು ಅನುಸರಿಸುವ ಜಾಯಮಾನವಿದ್ದರೆ ಸಮಾಜ ಎಂದೂ ವಿಘಟಿತಗೊಳ್ಳದು. ನಮ್ಮ ಆಲೋಚನೆಗಳು ಹಣ ಮತ್ತು ಅಧಿಕಾರಕ್ಕೆ ಸೀಮಿತವಾಗಬಾರದು. ಸಂಪತ್ತಿನ ಕ್ರೋಢೀಕರಣ ಮುಖ್ಯವಲ್ಲ ಅದರ ಸದ್ಭಳಕೆ ಬಹುಮುಖ್ಯ. ಕನಕದಾಸರು ಈ ಬಗೆಯ ಸಾಮಾಜಿಕ ಸ್ವಾಸ್ಥ್ಯದ ಕನಸು ಕಂಡವರು ಎಂಬುದಾಗಿ ಹೇಳಿದರು.
ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕನಕದಾಸ ಅಧ್ಯಯನ ಸಂಶೋಧನ ಪೀಠದ ಸಲಹಾ ಸಮಿತಿ ಸದಸ್ಯರಾದ ಡಾ. ಅರುಣ್ ಕುಮಾರ್ ಎಸ್.ಆರ್. ಉಪಸ್ಥಿತರಿದ್ದರು. ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರಶಾಂತ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿಗಳಾದ ಅಮೃತಾ ಹಾಗೂ ನಮೃತಾ ಕನಕಗಾಯನ ಹಾಡಿದರು. ಬಿ.ಎ ಪದವಿ ವಿದ್ಯಾರ್ಥಿ ಆದರ್ಶ ಕಾರ್ಯಕ್ರಮ ನಿರೂಪಿಸಿದರು.





No comments:
Post a Comment