ಕನಕದಾಸರು ಕೇವಲ ಸಂತರಲ್ಲ, ಕವಿ, ತತ್ವಜ್ಞಾನಿ, ಸಂಗೀತಗಾರರಾಗಿ ಬೆಳಗಿದವರು. ಅವರ ಲೌಕಿಕ ಬದುಕಿನ ಕುರಿತಾದ ನಿಲುವುಗಳನ್ನೇ ಅವರು ಅನುಭವದ ಸಾಹಿತ್ಯ ಸೃಷ್ಟಿಯಾಗಿಸಿದರು. ಸಮಾಜ ಹೇಗಿದೆ? ಹೇಗಾಗಬೇಕು ಎಂಬುದರ ಬಗ್ಗೆ ಅವರ ಚಿಂತನೆಗಳು ಪ್ರಾಯೋಗಿಕವಾದುವುಗಳು. ಹಾಗಾಗಿಯೇ ಕನಕದಾಸರು ಇಂದಿಗೂ ಪ್ರಸ್ತುತರಾಗುತ್ತಾರೆ. ಲೌಕಿಕದಲ್ಲೇ ಅಲೌಕಿಕವನ್ನು ಹುಡುಕುವ, ಅದಕ್ಕಾಗಿ ತನ್ನ ಜೀವನ ದಾರಿಯನ್ನು ಸರಿಪಡಿಸಿಕೊಳ್ಳುವ ಬಗ್ಗೆ ಅವರು ತುಂಬಾ ಪ್ರಾಯೋಗಿಕವಾಗಿ ಬದುಕಿದರು. ಸರ್ವಸಮಾನತೆಯನ್ನು ಬದುಕಿನ ಮೂಲ ಚಿಂತನೆಯಾಗಿ ಕಂಡುಕೊಳ್ಳಬೇಕೆಂಬುದಾಗಿ ಕನಕದಾಸರು ಕನಸು ಕಂಡರು. ತಾವೂ ಹಾಗೆ ಬದುಕಿದರು. ಸಮಾಜದಲ್ಲಿ ಬದಲಾವಣೆಗಾಗಿ ಶ್ರಮಿಸಿದರು ಎಂಬುದಾಗಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೆಂದ್ರ ಅಡಿಗ ಹೇಳಿದರು. ಅವರು ದಿನಾಂಕ: ೨೩.೦೯.೨೦೨೬, ಬುಧವಾರದಂದು, ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನಕದಾಸ ಅಧ್ಯಯನ ಸಂಶೋಧನ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಾರಕೂರು, ಕನ್ನಡ ವಿಭಾಗ ಇದರ ಜಂಟಿ ಆಶ್ರಯದಲ್ಲಿ ನಡೆದ ಕನಕ ಸಾಹಿತ್ಯದಲ್ಲಿ ನೆಲ-ಜಲ ಸಂಸ್ಕೃತಿ ಚಿಂತನೆ; ಎಂಬ ವಿಷಯದಲ್ಲಿ ನಡೆದ ಕನಕ ಚಿಂತನ-ವಿಶೇಷ ಉಪನ್ಯಾಸ ಮಾಲಿಕೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಭಾಸ್ಕರ್ ಶೆಟ್ಟಿ ಮಾತನಾಡಿ, ದಾಸ ಶ್ರೇಷ್ಟರಲ್ಲಿ ಕನಕದಾಸರು ಬಹುಮುಖ್ಯರಾಗುತ್ತಾರೆ. ಅವರ ತತ್ವ, ಚಿಂತನೆಗಳು ಅನುಕರಣಯೋಗ್ಯ. ಕನಕದಾಸರ ಸಮಾನತೆ, ಮಾನವೀಯ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ನಮ್ಮಲ್ಲಾಗಬೇಕು ಎಂದರು.
ಕನಕದಾಸರ ಕೀರ್ತನೆಗಳಲ್ಲಿ ನೆಲ-ಜಲ ಸಂಸ್ಕೃತಿ ಚಿಂತನೆ ಎಂಬ ವಿಷಯದ ಕುರಿತು ಪುತೂರಿನ ಬೆಟ್ಟಂಪಾಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಸುಬ್ರಹ್ಮಣ್ಯ ಕೆ ಅವರು ಮಾತನಾಡಿ ‘ಕನಕದಾಸರ ಕೀರ್ತನೆಗಳು ನೆಲ-ಜಲಗಳ, ಅಂದರೆ ಪ್ರಕೃತಿಯ ರೂಪಕಗಳಾಗಿ ಮೂಡಿವೆ. ಅವರ ಬದುಕನ್ನು ಗಮನಿಸಿದರೆ ಹಲವು ರೀತಿಯಲ್ಲಿ ನಿರಾಕರಣೆಗೆ ಅವರು ಒಳಗಾದರೂ, ಈ ಭೂಮಿಗೆ, ನೀರಿಗೆ ಭೇದಭಾವ ಇಲ್ಲ. ಇವೆರಡೂ ಎಲ್ಲರಿಗೂ, ಸಮಾನವಾಗಿ ದಕ್ಕುತ್ತವೆ. ಭೇದವಿಲ್ಲದೆ ಸಕಲ ಜೀವಿಗಳನ್ನು ಹೊತ್ತಿಹಳು ಭೂದೇವಿ’ ಎಂಬ ಕೀರ್ತನೆಯಲ್ಲಿ ಸಮಾನತೆಯ ಚೈತನ್ಯ ಇಡೀ ಪರಿಸರದಲ್ಲಿದೆ. ಆದರೆ ಮನುಜರಲ್ಲಿ ನಿರಂತರವಾಗಿ ಪುಟಿದೇಳುವ ಅವೈಚಾರಿಕ ಚಿಂತನೆಗಳು ಅವರ ಸುಗಮದಾರಿಗೆ ಮುಳ್ಳಾಗುತ್ತವೆ ಎಂಬುದನ್ನು ಕನಕದಾಸರು ತಮ್ಮ ಹಲವು ಕೀರ್ತನೆಗಳಲ್ಲಿ ನಿಚ್ಚಳವಾಗಿ ಪಡಿಮೂಡಿಸುತ್ತಾರೆ’ ಎಂದರು.
ಕನಕದಸರ ಕಾವ್ಯಗಳಲ್ಲಿ ನೆಲ-ಜಲ ಸಂಸ್ಕೃತಿ ಚಿಂತನೆ ಎಂಬ ವಿಚಾರವಾಗಿ ಕುಂದಾಪುರ ವಕ್ವಾಡಿಯ ಗುರುಕುಲ ಪ.ಪೂ ಕಾಲೇಜಿನ ಉಪನ್ಯಾಸಕರಾದ ಡಾ.ಕೃಷ್ಣರಾಜ ಕರಬ ತಮ್ಮ ಉಪನ್ಯಾಸದಲ್ಲಿ ಮಾತನಾಡಿ ಕನಕದಾಸರು ತಿಮ್ಮಪ್ಪ ದಂಡನಾಯಕರಾಗಿದ್ದ ಕಾಲದಲ್ಲಿ ಕಟ್ಟಿಸಿದ ಕೆರೆಗಳು, ಜಲಮೂಲಗಳ ಸಂಗ್ರಹಗಳನ್ನು ಕಟ್ಟುವುದಕ್ಕೆ ತೋರಿದ ಉತ್ಸಾಹದಿಂದಲಾಗಿ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಕೃಷಿ ಸಂಪತ್ತು ಅರಳಿದವು. ಅವರ ಕಾವ್ಯಗಳಲ್ಲಿ ಅಲೌಕಿಕ ಚಿತ್ರಗಳನ್ನು ಪಡಿಮೂಡಿಸುವ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ರಾಮಧಾನ್ಯ ಚರಿತೆಯಲ್ಲಿ ನೆಲ-ಜಲ ಸಂಸ್ಕೃತಿಯ ಚಿಂತನೆಯನ್ನು ಅಪಾರವಾಗಿ ಹುದುಗಿಡುತ್ತಾರೆ. ಸ್ಥಾವರ ಮತ್ತು ಜಂಗಮ ಪರಿಕಲ್ಪನೆಯಡಿಯಲ್ಲಿ ನೆಲ ಮತ್ತು ನೀರಿನ ಕುರಿತಾದ ಚಿಂತನೆಯನ್ನು ಮಾಡುತ್ತಾರೆ ಎಂಬುದಾಗಿ ಸೋದಾಹರಣವಾಗಿ ಚರ್ಚಿಸಿದರು.
ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕನಕದಾಸ ಅಧ್ಯಯನ ಸಂಶೋಧನ ಪೀಠದ ಸಲಹಾ ಸಮಿತಿ ಸದಸ್ಯರಾದ ಡಾ. ಅರುಣ್ ಕುಮಾರ್ ಎಸ್.ಆರ್. ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶೈಲಜಾ ಶೆಟ್ಟಿ ವಂದಿಸಿದರು. ಡಾ. ಪಲ್ಲವಿ ಎನ್ ಕಾರ್ಯಕ್ರಮ ನಿರೂಪಿಸಿದರು.














No comments:
Post a Comment