ಅಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿದರೂ ಸರಳ ಜೀವನ ನಡೆಸಿದ ರಾಷ್ಟ್ರಕವಿ ಗೋವಿಂದ ಪೈ ಕವಿ, ಸಂಶೋಧಕ, ಶ್ರೇಷ್ಠ ವಿಮರ್ಶಕನಾಗಿ ಸೈ ಎನಿಸಿದ ಮೇರು ವ್ಯಕ್ತಿತ್ವ ಎಂದು ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಬಿ.ಪಿ ಸಂಪತ್ ಕುಮಾರ್ ಹೇಳಿದರು. ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಸಹಯೋಗದಲ್ಲಿ ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ಧ್ವನ್ಯಾಲೋಕದಲ್ಲಿ ಹಮ್ಮಿಕೊಂಡಿರುವ ಗೋವಿಂದ ಪೈ ೧೪೩ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ‘ಗೋವಿಂದ ಪೈ ವ್ಯಕ್ತಿ-ಶಕ್ತಿ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.
ಪೈಗಳು ಕನ್ನಡದ ಬಗ್ಗೆ ಅಪ್ಪಟ ಪ್ರೀತಿ ಹೊಂದಿದ್ದರು. ೮೦ ವರ್ಷಗಳ ತುಂಬು ಜೀವನ ನಡೆಸಿದ್ದ ಅವರು ಸರಳ ವ್ಯಕ್ತಿತ್ವದ ಜತೆ ವಾರ್ಧಕ್ಯದಲ್ಲಿ ಸನ್ಯಾಸಿಯಂತೆ ಜೀವನ ನಡೆಸಿದ್ದರು. ಪ್ರಶಸ್ತಿ ಗೌರವದಲ್ಲಿ ನಿರಾಸಕ್ತಿ ಹೊಂದಿದ್ದ ಅವರು ಅಧ್ಯಯನದಲ್ಲಿ ತುಂಬಾ ಚತುರರು. ಕೊಂಕಣಿ ಮಾತೃಭಾಷೆಯಾಗಿದ್ದರೂ ೨೨ ಭಾಷೆಗಳಲ್ಲಿ ಓದಿ ಬರೆಯುವ ಜ್ಞಾನವಿತ್ತು ಎಂದರು.
ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕೆ.ಸದಾಶಿವ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಹಿತ್ಯ ಸಂಶೋಧನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಗೋವಿಂದ ಪೈ ಅವರು ದೇಶಭಿಮಾನದ ಜತೆ ಅಸ್ಪöÈಶ್ಯತಾ ನಿವಾರಣೆಗೆ ಶ್ರಮಿಸಿ, ಸಾಹಿತ್ಯದ ಮೂಲಕ ಜನಜಾಗೃತಿ ಗೊಳಿಸಿದ್ದಾರೆ. ಕನ್ನಡ ಭಾಷೆ ಸಾಹಿತ್ಯಕ್ಕೆ ಜೀವನ ಸಮರ್ಪಿಸಿಕೊಂಡ ಕವಿ ಎಂದು ವಿಶ್ಲೇಷಿಸಿದರು.
ಕು. ಶ್ರಾವ್ಯ ಬಾಸ್ರಿ ಅವರು ಗೋವಿಂದ ಪೈಗಳ ಕಾವ್ಯದಿಂದ ಆಯ್ದ ಸಾಲುಗಳ ಕಾವ್ಯಪ್ರಸ್ತುತಿ ನಡೆಸಿಕೊಟ್ಟರು. ಕೇಂದ್ರದ ಆಡಳಿತಾಧಿಕಾರಿ ಡಾ. ಬಿ ಜಗದೀಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆ ಗೈದರು. ಆರ್.ಆರ್.ಸಿ ಸಹ ಸಂಶೋಧಕರಾದ ಡಾ. ಅರುಣ್ ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
No comments:
Post a Comment