ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ದಿವಂಗತ ಮುಳಿಯ ತಿಮ್ಮಪ್ಪಯ್ಯನವರ ನೆನಪಿನಲ್ಲಿ ನೀಡಲಾಗುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಕನ್ನಡದ ಪ್ರಸಿದ್ಧ ಬರಹಗಾರ್ತಿ ಡಾ. ಗಿರಿಜಾಶಾಸ್ತ್ರಿ ಅವರು ಆಯ್ಕೆಯಾಗಿದ್ದಾರೆ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ೨೫೦೦೦/- ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜನವರಿ ೧೭, ೨೦೨೬ರಂದು ನಡೆಯಲಿರುವುದು.
ಡಾ. ಗಿರಿಜಾಶಾಸ್ತ್ರಿ ಅವರು ಮೈಸೂರಿನ ಕೆ. ಆರ್. ನಗರ ತಾಲೂಕಿನ ಸಾಲಿಗ್ರಾಮದವರು. ತಂದೆ ದಿ. ಶ್ರೀಕಂಠಶಾಸ್ತ್ರಿ, ತಾಯಿ ದಿ. ಸೀತಮ್ಮ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದು, ‘ಕನ್ನಡ ಕಥಾಸಾಹಿತ್ಯ ಒಂದು ಸ್ತ್ರೀವಾದಿ ಅಧ್ಯಯನ ಮಹಾಪ್ರಬಂಧ’ಕ್ಕೆ ಮುಂಬೈ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪಡೆದಿದ್ದಾರೆ. ಗಿರಿಜಾ ಶಾಸ್ತ್ರಿಯವರ ಬರಹಗಳು ಎಲ್ಲಾ ಪ್ರಕಾರಗಳಲ್ಲಿ ಮೂಡಿದ್ದು ವಿಶೇಷವಾಗಿ ಕವಿತೆ, ಪ್ರಬಂಧ, ಅನುವಾದ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡಿವೆ. ಸಂಶೋಧಕರಾಗಿ ಪ್ರಬಂಧಗಳನ್ನು ಇವರು ಬರೆದಿದ್ದಾರೆ. ಕಥಾಸಾಹಿತ್ಯ ಒಂದು ಸ್ತ್ರೀವಾದಿ ಅಧ್ಯಯನ, ಮಾನಸಿಯ ಲೋಕ, ವೇಶ್ಯಾ ಸಂಕಥನ ಇವರ ಮುಖ್ಯ ಸಂಶೋಧನಾ ಪ್ರಬಂಧಗಳು. ಹೆಣ್ಣೊಬ್ಬಳ ದನಿ, ಪುಸ್ತಕ ಮತ್ತು ನವಿಲುಗರಿ, ಉರಿಯ ಉಯ್ಲು ಮೊದಲಾದವು ಇವರ ಕವನಸಂಕಲನಗಳು ಅಲ್ಲದೆ ಹಲವಾರು ವಿಮರ್ಶಾಲೇಖನಗಳನ್ನು ಬರೆದಿದ್ದಾರೆ. ಸಂಪಾದಕರಾಗಿ, ಅನುವಾದಕರಾಗಿ, ವಿಮರ್ಶಕರಾಗಿ ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ ಇವರು ಅಮೇರಿಕಾಯಣ ಸಹಪಯಣ ಎಂಬ ಪ್ರವಾಸ ಕಥನವನ್ನು ಬರೆದಿದ್ದಾರೆ. ಸಮಾಜಮುಖಿ ಸಂಘಟನೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅನೇಕ ಸಂಸ್ಥೆಗಳು ಆಯೋಜಿಸಿದ ರಾಷ್ಟ್ರೀಯ, ಸ್ಥಳೀಯ ವಿಚಾರ ಸಂಕಿರಣಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಮಂಡನೆ, ಕವಿಗೋಷ್ಠಿಗಳಲ್ಲಿ ಕವಿತಾ ವಾಚನ ಮಾಡಿದ್ದಲ್ಲದೆ, ಅಭಿನಂದನ ಗ್ರಂಥಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಇವರಿಗೆ ಹರಿಹರ ಶ್ರೀ ಪ್ರಶಸ್ತಿ, ಸಂಕ್ರಮಣ ಪ್ರಶಸ್ತಿ, ಸುಶೀಲಶೆಟ್ಟಿ ಪ್ರಶಸ್ತಿ, ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ, ವಿಶಿಷ್ಟ ಲೇಖಕಿ ಪ್ರಶಸ್ತಿ ಸೇರಿದಂತೆ ಹಲವಾರು ಸಂಮಾನ ಗೌರವಗಳು ಸಂದಿವೆ.

No comments:
Post a Comment