Monday, November 10, 2025

ದಿನಾಂಕ: 08.11.2025ರಂದು ನಡೆದ ಕನಕ ಜಯಂತಿ ಕಾರ್ಯಕ್ರಮ - ಕನಕ ಕೀರ್ತನೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ

 




ಹೆಚ್ಚುತ್ತಿದೆ ಜಾತಿಗಳ ನಡುವಿನ ಪೈಪೋಟಿ – ಡಾ. ಮಹಾಬಲೇಶ್ವರ ರಾವ್

ಕೆಳಜಾತಿಯಲ್ಲಿ ಹುಟ್ಟಿ ಸಾಮಾಜಿಕ ಅಪಮಾನ ಅನುಭವಿಸಿದರೂ ಸಮಸಮಾಜದ ಸ್ಥಾಪನೆ ನಿಟ್ಟಿನಲ್ಲಿ ಕುಲಕ್ಕಿಂತ ಭಕ್ತಿ, ಮಾನವೀಯತೆಯೇ ಶ್ರೇಷ್ಠವೆಂದು ಪ್ರತಿಪಾದಿಸಿದ ಕನಕದಾಸರ ಚಿಂತನೆ ಇಂದಿಗೂ ಪ್ರಸ್ತುತ ಎಂದು ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಹೇಳಿದರು.  ಅವರು ಕನಕದಾಸ ಅಧ್ಯಯನ ಸಂಶೋಧನ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ದಿನಾಂಕ: ೮.೧೧.೨೦೨೫ರಂದು ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ನಡೆದ ಕನಕ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರದ್ಧಾ ಕೇಂದ್ರಗಳು ವ್ಯಾಪಾರ ಕೇಂದ್ರಗಳಾಗಿ ಆಧ್ಯಾತ್ಮಿಕತೆ ಸೊರಗಿದೆ. ಸ್ಥಳಪುರಾಣದ ಜತೆಗೆ ಐತಿಹ್ಯದ ಬಗೆಗೂ ವಿದ್ಯಾರ್ಥಿಗಳು ಗಮನಹರಿಸಬೇಕು. ವಿ.ವಿಗಳು ಆರ್ಥಿಕ ಸಹಿತ ಅನ್ಯ ಸಂಕಷ್ಟಗಳಿಂದ ಮುಚ್ಚುವ ಸ್ಥಿತಿಗೆ ಬಂದಿವೆ. ಕನಕ ಚಿಂತನೆಯ ಅರಿವು ವಿದ್ಯಾರ್ಥಿಗಳಲ್ಲಿ ಹಾಗೂ ಸಮಾಜದಲ್ಲಿ ಮೂಡಿಸಿ ಜೀವಂತವಾಗಿಡಬೇಕು ಎಂದರು. ವಿದ್ಯಾರ್ಥಿಗಳು ಕನಕರ ಸಹಿತ ದಾಸರ ಕೀರ್ತನೆ, ಶಿವಶರಣರ ವಚನ ಓದಿ ಅರ್ಥೆÊಸಿ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅನ್ಯಮತ ಖಂಡನೆ, ಸ್ವಮತ ಮಂಡನೆಯ ಕಾಲಘಟ್ಟದಲ್ಲಿ ಹರಿಹರ ಸಮನ್ವಯ ಸಾರುವ ಕೃತಿಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.

ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಮಂಗಳೂರಿನ ನರಸಿಂಹಮೂರ್ತಿ ಆರ್. ಅವರು ‘ದಾಸ ಪರಂಪರೆಯ ಅನನ್ಯ ಚೇತನ ಕನಕದಾಸರು’ ವಿಷಯದ ಕುರಿತು ಉಪನ್ಯಾಸ ನೀಡಿ, ಶಿವಶರಣರ ವಚನ ಮತ್ತು ದಾಸರ ಕೀರ್ತನೆಗಳು ಜಾತಿ, ಲಿಂಗ ತಾರತಮ್ಯ ಇಲ್ಲದೇ ಭಕ್ತಿ ಪ್ರಚಾರದ ಜತೆಗೆ ನಡೆ ನುಡಿ ಒಂದಾದ ಚಿಂತನೆಯಾಗಿದೆ. ೫೧೬ ವರ್ಷದ ಹಿಂದೆ ಬಾಳ್ವೆ ನಡೆಸಿದ್ದ ಕನಕದಾಸರ ಸಂದೇಶ ಇಂದಿಗೂ ಪ್ರಸ್ತುತ. ೧೨ನೇ ಶತಮಾನದ ವಚನ ಸಾಹಿತ್ಯ ಹಾಗೂ ೧೫ನೇ ಶತಮಾನದ ಹರಿದಾಸ ಸಾಹಿತ್ಯ ಇವೆರಡೂ ಜ್ಞಾನ ಪರಂಪರೆಯ ಔನ್ಯತ್ಯ ಹೆಚ್ಚಿಸಿದೆ. ಎರಡೂ ಪರಂಪರೆಯಲ್ಲಿ ನಡೆ - ನುಡಿ ಒಂದೇ ಆಗಿತ್ತು ಎಂದರು. ಎಂ.ಜಿ.ಎಂ ಕಾಲೇಜಿನ ಗಾಂಧಿಯನ್ ಸೆಂಟರ್‌ನ ಮುಖ್ಯಸ್ಥರಾದ ವಿನೀತ್ ರಾವ್ ಮಾತನಾಡಿ, ಎಂಜಿಎಂ ಕಾಲೇಜಿನ ಲಾಂಛನದಲ್ಲಿ ಕನಕದಾಸರಿಗೂ ಉಡುಪಿಗೂ ಇರುವ ಭಕ್ತಿಯ ನಂಟಿನ ಸಂಕೇತದ ರೂಪವನ್ನು ಚಿತ್ರಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕನಕ ಜಯಂತಿ ಹಿನ್ನೆಲೆಯಲ್ಲಿ ದಿನಾಂಕ: ೭.೧೧.೨೦೨೫ರಂದು ಉಡುಪಿ ವಲಯದ ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಕನಕ ಗಾಯನ ಸ್ಪರ್ಧೆ ಏರ್ಪಡಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ.ಪೂ ವಿಭಾಗದಲ್ಲಿ ಪೂರ್ಣಪ್ರಜ್ಞ ಕಾಲೇಜಿನ ಪ್ರಥಮ ಪಿ.ಯು.ಸಿ, ಮೇದಿನಿ ಭಟ್ (ಪ್ರಥಮ), ಉಡುಪಿ ಎಂ.ಜಿ.ಎಂ ಕಾಲೇಜಿನ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ, ಅದಿತಿ ಆರ್. ಐತಾಳ್ (ದ್ವಿತೀಯ), ವಿದ್ಯೋದಯ ಪ.ಪೂ ಕಾಲೇಜಿನ ದ್ವಿ.ತೀಯ ಪಿ.ಯು.ಸಿಯ ಎಚ್. ಅಚಿಂತ್ಯಾ ರಾವ್ (ತೃತೀಯ) ಹಾಗೂ ಪದವಿ ವಿಭಾಗದಲ್ಲಿ ಕುಂದಾಪುರ ಡಾ. ಬಿ.ಬಿ ಹೆಗ್ಡೆ ಕಾಲೇಜಿನ ತೃತೀಯ ಬಿ.ಕಾಂ, ಶ್ರೇಯಾ ನಾಗರಾಜ್ (ಪ್ರಥಮ) ಬ್ರಹ್ಮಾವರ ಎಸ್.ಎಂ.ಎಸ್. ಕಾಲೇಜಿನ ಪ್ರಥಮ ಬಿ.ಕಾಂ, ಚಂದನಾ ಸಿ.ಎಂ, (ದ್ವಿತೀಯ) ಹಾಗೂ ಎಂ.ಜಿ.ಎಂ ಕಾಲೇಜು ತೃತೀಯ ಬಿ.ಎಸ್ಸಿ ವಿಭಾಗದ  ಸಾತ್ವಿಕ್ ತೃತೀಯ ಸ್ಥಾನ ಪಡೆದರು. ಕನಕ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾಬಿ. ಜಗದೀಶ್ ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಆರ್.ಆರ್.ಸಿಯ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಆರಂಭದಲ್ಲಿ ಸ್ಪರ್ಧಾವಿಜೇತ ವಿದ್ಯಾರ್ಥಿಗಳಿಂದ ಕನಕ ಗಾಯನ ನಡೆಯಿತು.

No comments: